Spread the love

ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅತಿವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಸ್ಕೂಟಿ ಸವಾರನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ಕಾರವಾರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಿದ್ದರ ಮುದಗಾ ನಿವಾಸಿ 52 ವರ್ಷದ ಕೃಷ್ಣ ಗೋವಿಂದ ಗೌಡ ಮೃತಪಟ್ಟ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಇದೀಗ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಲಾಗಿದೆ.

ಬಿಣಗಾ ನಿವಾಸಿ 37 ವರ್ಷದ ನಾಗರಾಜ ವಾಸು ಗೌಡ ಅವರು ನೀಡಿರುವ ದೂರಿನ ಅನ್ವಯ, ಏಪ್ರಿಲ್ 5, 2026 ರಂದು ಸಂಜೆ 4.52 ಗಂಟೆಯ ಸುಮಾರಿಗೆ ಬಿಣಗಾದ ಚರ್ಚ್ ಕ್ರಾಸ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಗಂಗಾವತಿ ತಾಲೂಕಿನ ದಾಸನಾಳ ಮೂಲದ ಟ್ಯಾಂಕರ್ ಚಾಲಕ 31 ವರ್ಷದ ಗುರುಬಸಪ್ಪ ಶರಣಪ್ಪ ಬಾಳೆಕಾಯಿ ಎಂಬಾತ KA-01-AQ-5773 ನೋಂದಣಿ ಸಂಖ್ಯೆಯ ಟ್ಯಾಂಕರ್ ಅನ್ನು ಅತಿವೇಗ ಹಾಗೂ ಅತ್ಯಂತ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಕೃಷ್ಣ ಗೌಡ ಅವರು ಚಲಾಯಿಸುತ್ತಿದ್ದ KA-30-2994 ಸಂಖ್ಯೆಯ ಸ್ಕೂಟಿಗೆ ಭೀಕರವಾಗಿ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಡಿಕ್ಕಿಯ ರಭಸಕ್ಕೆ ಸ್ಕೂಟಿಯಿಂದ ರಸ್ತೆಗೆ ಬಿದ್ದ ಕೃಷ್ಣ ಗೌಡ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ರಕ್ತದೊಡುವಿನಲ್ಲಿದ್ದ ಅವರನ್ನು ತಕ್ಷಣವೇ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯ ಮೇರೆಗೆ ಗೋವಾದ ಬಾಂಬೋಲಿಂ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ 6 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಅವರು, ಏಪ್ರಿಲ್ 11 ರಂದು ರಾತ್ರಿ 8.52 ಗಂಟೆಗೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಬಂಧ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ಅಪಘಾತದ ಪ್ರಕರಣ ದಾಖಲಾಗಿತ್ತು. ಇದೀಗ ಗಾಯಾಳು ಮೃತಪಟ್ಟಿರುವುದರಿಂದ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಾಯ್ದೆಯ ಕಲಂ 106 ರ ಅಡಿಯಲ್ಲಿ ಪ್ರಕರಣವನ್ನು ಪರಿವರ್ತಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *