Spread the love

ಕಾರವಾರ: ಕಡಲನಗರಿ ಕಾರವಾರದಲ್ಲಿ ಪ್ರೋ. ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಇತರೆ ಸಂಘಟನೆಗಳು, ದಲಿತ ಸಂಘಟನೆಗಳ ಸಹಯೋಗದಲ್ಲಿ, ಅಧ್ಯಕ್ಷರಾದ ದೀಪಕ್ ಕುಡಾಳಕರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅದ್ದೂರಿ `ಕರಾವಳಿ ಭೀಮೋತ್ಸವ’ ಅಂಗವಾಗಿ ಎರಡನೇಯ ದಿನವೂ ವಿವಿಧ ಬಗೆಯ ಕಾರ್ಯಕ್ರಮಗಳು ಜನಮನಸೂರೆಗೊಂಡವು.

ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಶನಿವಾರದಿಂದ ಐದು ದಿನಗಳ ಕಾಲ ಜರುಗುವ ಕರಾವಳಿ ಭೀಮೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಎರಡನೇಯ ದಿನವಾದ ಭಾನುವಾರ ವೇದಿಕೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕ್ರಾಂತಿಗೀತೆಯ ಹಾಡುಗಳು, ಸಂವಿಧಾನ ಅರಿವು ಕಾರ್ಯಕ್ರಮ, ಕಲ್ಪನಾ ರಶ್ಮಿ ಕಲಾಲೋಕ ಕಾರವಾರ ಇವರಿಂದ ನೃತ್ಯ ರೂಪಕ, ಕೈಗಾರವರಿಂದ ಅಂಬೇಡ್ಕರ್ ಅವರ ಕುರಿತು `ಅರಿವು’ ನಾಟಕ, ವೈಶಾಲಿ ಕಾರವಾರ ಸಂಗಡಿಗರಿಂದ ಮೆಲೋಡಿ ವೈಸ್ ಕಾರ್ಯಕ್ರಮಗಳು ನೆರೆದಿದ್ದವರನ್ನು ರಂಜಿಸಿದವು.

ಸಾಂಸ್ಕೃತಿ ಕಾರ್ಯಕ್ರಮಗಳ ಕೊನೆಯಲ್ಲಿ ಜೀ ಕನ್ನಡದ ಸರಿಗಮಪ ಖ್ಯಾತಿಯ ಶಿವಾನಿ ಇವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದು ಪ್ರೇಕ್ಷಕರ ಮನಸೂರೆಗೊಂಡಿತು. ವೇದಿಕೆ ಎದುರು ನೆರೆದಿದ್ದ ನೂರಾರು ಮಂದಿ ಪ್ರೇಕ್ಷಕರು ಶಿವಾನಿ ಅವರ ಗಾಯನವನ್ನು ಆಸ್ವಾದಿಸಿ ಕರತಾಡನದ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಇನ್ನು ಕಾರ್ಯಕ್ರಮದಲ್ಲಿ ಭಾನುವಾರ ನಿಧನರಾದ ಖ್ಯಾತ ಗಾಯಕಿ, ಪದ್ಮ ವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಆಶಾ ಭೋಸ್ಲೇ ಅವರಿಗೆ ಕರಾವಳಿ ಭೀಮೋತ್ಸವ ತಂಡದಿಂದ ವೇದಿಕೆಯಲ್ಲೇ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೂರನೇ ದಿನದ ಕಾರ್ಯಕ್ರಮಗಳು:

ಕರಾವಳಿ ಭೀಮೋತ್ಸವದ ಮೂರನೇಯ ದಿನವಾದ ಸೋಮವಾರ, ಡಾ. ಬಿ.ಆರ್ ಅಂಬೇಡ್ಕರ್ ಅವರ ಕುರಿತು ಅಂಕೋಲಾದ ಸಾಯಿನಾಥ ನಾಯ್ಕ ಅವರಿಂದ ಕವನ ವಾಚನ, ಕಾರವಾರದ ನಿವೃತ್ತ ತಹಶೀಲ್ದಾರ್ ವಿನಾಯಕ ಅಂಕೋಲೆಕರ್ ಮತ್ತು ದಾಂಡೇಲಿಯ ಹರ್ಷಿತಾ ಆರ್ ಮಾಳಕರಿ ಅವರಿಂದ ಅಂಬೇಡ್ಕರ್ ಕ್ರಾಂತಿಗೀತೆ, ಪುರುಷೋತ್ತಮ ಗೌಡ ಇವರ ತಂಡದಿಂದ ಅಂಬೇಡ್ಕರ್ ಅವರ ಕುರಿತು ರೂಪಕ, ಶಿರಸಿಯ ಸಂತೋಷ ನಾಯ್ಕ ಮಧುರ ಗಾನ ಹಾಗೂ ಕಿಶೋರ್ ಅವರಿಂದ ಕರೋಕೆ ಗಾನ, ಕಾರವಾರದ ಸ್ಟಾರ್ ಚೋಯ್ಸ್ ಇವರಿಂದ ನೃತ್ಯ ರೂಪಕ ಇದಲಿದ್ದು, ಸ್ಯಾಂಡಲ್‌ವುಡ್ ನ ಪ್ರಸಿದ್ಧ ಹಿನ್ನಲೆ ಗಾಯಕರಾದ ಶ್ರೀ ಹರ್ಷ ಹಾಗೂ ಇವರ ಸಂಗಡಿಗರಿಂದ ಸುಮಧುರ ಗಾಯನ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *