ಕಡಲನಗರಿ ಕಾರವಾರದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ‘ಕರಾವಳಿ ಭೀಮೋತ್ಸವ’ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪ್ರೇಕ್ಷಕರ ಅದ್ಭುತ ಸ್ಪಂದನೆಯೊಂದಿಗೆ ವಿಜೃಂಭಣೆಯಿಂದ ಜರುಗಿತು.
ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಯಾಂಡಲ್‌ವುಡ್ ಹಿನ್ನೆಲೆ ಗಾಯಕ ಶ್ರೀ ಹರ್ಷ ಹಾಗೂ ಅವರ ತಂಡದ ಸುಮಧುರ ಗಾಯನ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಅವರ ಇಂಪಾದ ಹಾಡುಗಳಿಗೆ ನೆರೆದಿದ್ದ ಯುವಕ-ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಎದ್ದು ನಿಂತು ಕುಣಿದು ಕುಪ್ಪಳಿಸುವ ಮೂಲಕ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಆಸ್ವಾದಿಸಿದರು.
ಈ ಭವ್ಯ ವೇದಿಕೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕುರಿತಾದ ಕವನ ವಾಚನ ಹಾಗೂ ಕ್ರಾಂತಿಗೀತೆಗಳ ಗಾಯನ ವಿಶೇಷ ಗಮನ ಸೆಳೆಯಿತು. ಅಂಕೋಲಾದ ಸಾಯಿನಾಥ ನಾಯ್ಕ, ಕಾರವಾರದ ನಿವೃತ್ತ ತಹಶೀಲ್ದಾರ್ ವಿನಾಯಕ ಅಂಕೋಲೆಕರ್ ಹಾಗೂ ದಾಂಡೇಲಿಯ ಹರ್ಷಿತಾ ಆರ್. ಮಾಳಕರಿ ಅವರು ಕವನ ವಾಚಿಸಿದರು.
ಪುರುಷೋತ್ತಮ ಗೌಡ ಅವರಿಂದ ಅಂಬೇಡ್ಕರ್ ಅವರ ಸಾಮಾಜಿಕ ಸಂದೇಶ ಸಾರುವ ರೂಪಕ, ಸಂತೋಷ್ ನಾಯ್ಕ ಹಾಗೂ ಕಿಶೋರ್ ಅವರ ಕರೋಕೆ ಗಾಯನ, ಸ್ಟಾರ್ ಜೋಯ್ಸ್ ಕಾರವಾರ ತಂಡದ ನೃತ್ಯ ರೂಪಕ ಪ್ರೇಕ್ಷಕರನ್ನು ರಂಜಿಸಿದವು. ವಿಶೇಷವಾಗಿ ಮಿಸ್ ಯೂನಿವರ್ಸ್ ಕರ್ನಾಟಕ ಗ್ರ್ಯಾಂಡ್ ಫಿನಾಲೆಯ ಟಾಪ್-10ರಲ್ಲಿ ಸ್ಥಾನ ಪಡೆದಿದ್ದ ಕಾರವಾರದ ಬೆಡಗಿ ಶ್ರೀಯಾ ರಾಯ್ಕರ್ ಅವರ ಹೆಜ್ಜೆಗಳು ನೋಡುಗರನ್ನು ಬೆರಗುಗೊಳಿಸಿದವು.
ಕರಾವಳಿ ಭೀಮೋತ್ಸವದ ನಾಲ್ಕನೇ ದಿನವಾದ ಇಂದು(ಮಂಗಳವಾರ) ನ್ಯಾಯಾಂಗ ಕ್ಷೇತ್ರಕ್ಕೆ ಹೊಸದಾಗಿ ಆಯ್ಕೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಪ್ರತಿಭೆಗಳಾದ ಪ್ರತೀಕ್ಷಾ ಪ್ರದೀಪ ಪಾವಸ್ಕರ, ಪದ್ಮಾವತಿ ಎನ್. ಮಾದಿಗ ಹಾಗೂ ಆದಿತ್ಯ ವಿ. ಹೊಸಲ್ಕರ್ ಅವರಿಗೆ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಅದ್ದೂರಿ ನಾಗರಿಕ ಸನ್ಮಾನ ನಡೆಯಲಿದೆ. ಇದೇ ವೇಳೆ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅದೈತ್ ಕುಡಾಳಕರ್ ಅವರಿಂದ ‘ಗಾಂಧಾರ ವಿದ್ಯೆ’ ಪ್ರದರ್ಶನ ಕೂಡ ಜರುಗಲಿದ್ದು, ಕರಾವಳಿ ಉತ್ಸವದ ಮೆರುಗು ಮತ್ತಷ್ಟು ಹೆಚ್ಚಲಿದೆ.
