Spread the love

ಭಟ್ಕಳ: ನಗರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಶಹರ ಪೊಲೀಸ್ ಠಾಣೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ 11:30 ರ ಸುಮಾರಿಗೆ ಭಟ್ಕಳ ಶಹರದ ಮುರ್ಡೇಶ್ವರ ಆರ್ಚ್ ಹತ್ತಿರ ಈ ಘಟನೆ ನಡೆದಿದ್ದು, ಕಾರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಿಢೀರ್ ದಾಳಿ ನಡೆಸಿದ್ದಾರೆ.

ಬಂಧಿತ ಆರೋಪಿಯನ್ನು ಭಟ್ಕಳ ತಾಲೂಕಿನ ಪಲ್ಕೀರಿ ನಗರದ ನಿವಾಸಿ, 24 ವರ್ಷದ ಅಬ್ದುಲ್ ಮುತಾಲಿಬ್ ಬಿನ್ ಮೊಹಿದ್ದೀನ್ ಮುತಾಲಿಬ್ ಬ್ಯಾರಿ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಚಾಲಕನಾಗಿರುವ ಈತ ಬಿಳಿ ಬಣ್ಣದ ಹೋಂಡಾ ಸಿಟಿ ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಗಿರಾಕಿಗಳಿಗಾಗಿ ಕಾಯುತ್ತಿದ್ದ. ಕಾರ್ಯಾಚರಣೆಯ ವೇಳೆ ಆರೋಪಿಯಿಂದ 5 ಸಾವಿರ ರೂಪಾಯಿ ಮೌಲ್ಯದ 84 ಗ್ರಾಂ ತೂಕದ ಕಾಂಡ ಮತ್ತು ಬೀಜ ಮಿಶ್ರಿತ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದಲ್ಲದೆ ಕೃತ್ಯಕ್ಕೆ ಬಳಸಿದ್ದ 5 ಲಕ್ಷ ರೂಪಾಯಿ ಮೌಲ್ಯದ ಹೋಂಡಾ ಸಿಟಿ ಕಾರು ಹಾಗೂ ಗಾಂಜಾ ಮಾರಾಟದ ಜಾಲದ ಸಂಪರ್ಕಕ್ಕಾಗಿ ಬಳಸುತ್ತಿದ್ದ ವಿವೋ ಮೊಬೈಲ್ ಫೋನ್ ಅನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ನವೀನ್ ನಾಯ್ಕ್ ಅವರು ದೂರು ನೀಡಿದ್ದು, ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *