ಹೊನ್ನಾವರ: ಪಟ್ಟಣದ ಹೃದಯಭಾಗದಲ್ಲಿರುವ ಸೂಪರ್ ಮಾರ್ಕೆಟ್‌ವೊಂದಕ್ಕೆ ನುಗ್ಗಿರುವ ಅಪರಿಚಿತ ಕಳ್ಳರು, ಕಟ್ಟಡದ ವಾಲ್ ಗ್ಲಾಸ್ (Wall Glass) ಒಡೆದು ಲಕ್ಷಾಂತರ ರೂಪಾಯಿ ನಗದು ಹಾಗೂ ವಸ್ತುಗಳನ್ನು ದೋಚಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.
ಪಟ್ಟಣದ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿರುವ ‘ಎ.ಆರ್.ಎಂ ಬಜಾರ್’ (A.R.M Bazar) ಸೂಪರ್ ಮಾರ್ಕೆಟ್‌ನಲ್ಲಿ ಈ ಕಳ್ಳತನ ನಡೆದಿದೆ. ಏಪ್ರಿಲ್ 15ರ ರಾತ್ರಿ 9:30 ರಿಂದ ಏಪ್ರಿಲ್ 16ರ ಬೆಳಿಗ್ಗೆ 8:30ರ ನಡುವಿನ ಅವಧಿಯಲ್ಲಿ ಈ ಕೃತ್ಯ ಎಸಗಲಾಗಿದೆ.
ಕಳ್ಳತನವಾಗಿದ್ದು ಹೇಗೆ?
ರಾತ್ರಿಯ ವೇಳೆ ಸೂಪರ್ ಮಾರ್ಕೆಟ್‌ನ ಒಂದನೇ ಮಹಡಿಗೆ ಅಳವಡಿಸಲಾಗಿದ್ದ 6 ಅಡಿ ಉದ್ದ ಮತ್ತು 3 ಅಡಿ ಅಗಲದ 12 ಎಂ.ಎಂ. ದಪ್ಪದ ವಾಲ್ ಗ್ಲಾಸ್ ಅನ್ನು ಒಡೆದು ಖದೀಮರು ಒಳನುಗ್ಗಿದ್ದಾರೆ. ಬಳಿಕ ಕ್ಯಾಶ್ ಕೌಂಟರ್ ಹಾಗೂ ಕ್ಯಾಶ್ ಲಾಕರ್‌ನಲ್ಲಿದ್ದ ಹಣವನ್ನು ದೋಚಿದ್ದಾರೆ.
ಕಳುವಾದ ವಸ್ತುಗಳ ವಿವರ: ಲಾಕರ್‌ನಲ್ಲಿದ್ದ ಒಟ್ಟು ನಗದು: 1,20,000 ರೂ., ಎಸ್.ವಿ.ಆರ್ (SVR): 25,000 ರೂ. ಮೌಲ್ಯ. ಕಳ್ಳರು ಗ್ಲಾಸ್ ಒಡೆದಿದ್ದರಿಂದ ಅಂದಾಜು 3,000 ರೂ. ಮೌಲ್ಯದ ಹಾನಿ ಸಂಭವಿಸಿದೆ.
ಈ ಕುರಿತು ಸೂಪರ್ ಮಾರ್ಕೆಟ್ ಮಾಲೀಕರಾದ ಹೊನ್ನಾವರದ ಗಾಂಧಿನಗರ ನಿವಾಸಿ ಮಂಜುನಾಥ್ ಅಪ್ಪು ನೇಸರಗಿ (56) ಅವರು ಗುರುವಾರ (ಏಪ್ರಿಲ್ 16) ಮಧ್ಯಾಹ್ನ ಹೊನ್ನಾವರ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಅಪರಿಚಿತ ಆರೋಪಿಗಳ ವಿರುದ್ಧ ಸೆಕ್ಷನ್ 331(3), 331(4), 305, 324(3) ರಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಳ್ಳರಿಗಾಗಿ ಹಾಗೂ ಕಳುವಾದ ವಸ್ತುಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
