ಹೊನ್ನಾವರ: ತಾಲೂಕಿನಲ್ಲಿ ಭಾರಿ ಪ್ರಮಾಣದ ಚಿನ್ನಾಭರಣ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ. ಮನೆಯಲ್ಲಿದ್ದ ಕಬ್ಬಿಣದ ಟ್ರಂಕ್‌ನಲ್ಲಿ ಇರಿಸಲಾಗಿದ್ದ ಒಟ್ಟು 128 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ ನಗದು ಹಣವನ್ನು ಕಳ್ಳತನ ಮಾಡಲಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ದೂರುದಾರರು ಹೊನ್ನಾವರ ತಾಲೂಕಿನ ದೇವಸ್ಥಾನ ಕೇರಿ ನಿವಾಸಿ ಧನುಷ್ ಶ್ರೀಧರ ಗೌಡ ಎಂಬಾತನ ಮೇಲೆ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಕಲಂ 305 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಾಣಾಕ್ಷತನದಿಂದ ತನಿಖೆ ಕೈಗೊಂಡು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು, ಆರೋಪಿಗಳ ಪತ್ತೆಗಾಗಿ ಅನುಭವಿ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿದ್ದರು. ಖಚಿತ ಮಾಹಿತಿಯ ಮೇರೆಗೆ ಪ್ರಮುಖ ಆರೋಪಿ ಧನುಷ್ ಶ್ರೀಧರ ಗೌಡ ಹಾಗೂ ಆತನಿಗೆ ಕಳವುಗೈದ ಆಭರಣಗಳನ್ನು ವಿಲೇವಾರಿ ಮಾಡಲು ಹಾಗೂ ಮಾರಾಟ ಮಾಡಲು ಸಹಾಯ ಮಾಡಿದ ಸ್ನೇಹಿತ ಗೇರುಸೊಪ್ಪ ಮೆಟ್ಟಿನಗದ್ದೆ ನಿವಾಸಿ ಗೌರೀಶ ಗಣಪತಿ ಗೌಡ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಆರೋಪಿಗಳು ತಾವು ಕದ್ದ ಬಂಗಾರವನ್ನು ಹೊನ್ನಾವರದ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಹಾಗೂ ಮುತ್ತೂಟ್ ಫಿನ್‌ಕಾರ್ಪ್‌ನಲ್ಲಿ ಅಡವಿಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಒಟ್ಟು 17,08,300 ರೂ. ಮೌಲ್ಯದ 127.5 ಗ್ರಾಂ ಬಂಗಾರದ ಆಭರಣಗಳನ್ನು ಯಶಸ್ವಿಯಾಗಿ ಜಪ್ತು ಮಾಡಿದ್ದಾರೆ. ಬಂಧಿತ ಇಬ್ಬರೂ ಆರೋಪಿಗಳನ್ನು ನಿಯಮಾನುಸಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಹಾಗೂ ಭಟ್ಕಳ ಉಪವಿಭಾಗದ ಡಿವೈಎಸ್‌ಪಿ ಗಿರೀಶ ಬಿ. ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಹೊನ್ನಾವರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ಎಸ್. ಅವರ ನೇತೃತ್ವದಲ್ಲಿ ಪಿ.ಎಸ್.ಐ, ಮಹಾಂತೇಶ ವಾಲ್ಮೀಕಿ, ಪಿ.ಎಸ್.ಐ ಸಂಗೀತಾ, ಪ್ರೊಬೇಷನರಿ ಪಿ.ಎಸ್.ಐ ರೇಣುಕಾ ಹಾಗೂ ಸಿಬ್ಬಂದಿಗಳಾದ ಸಿ.ಎಚ್.ಸಿ-525 ಗಜಾನನ ನಾಯ್ಕ, ಸಿ.ಪಿ.ಸಿ-1067 ಮನೋಜ ಡಿ, ಸಿ.ಪಿ.ಸಿ-466 ರವಿ ನಾಯ್ಕ ಮತ್ತು ಸಿ.ಪಿ.ಸಿ-1942 ಸಚಿನ್ ನಾಯ್ಕ ಅವರು ಆರೋಪಿಗಳನ್ನು ಬಂಧಿಸಿ, ಆಭರಣ ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಕರಣವನ್ನು ಭೇದಿಸುವಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಈ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಹಿರಿಯ ಅಧಿಕಾರಿಗಳು ತೀವ್ರವಾಗಿ ಪ್ರಶಂಸಿಸಿದ್ದಾರೆ.
