Spread the love

ದಾಂಡೇಲಿ: ನಗರದ ಕುಳಗಿ ರಸ್ತೆಯ ಬಳಿ ಹರಿಯುವ ಕಾಳಿ ನದಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಮೊಸಳೆ ಏಕಾಏಕಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಭಾನುವಾರ (ಮೇ 3) ಬೆಳಿಗ್ಗೆ ಸಂಭವಿಸಿದೆ.

ಸ್ಥಳೀಯ ನಿವಾಸಿ ಆನಂದ್ ನಲ್ಲೂಜಿ ಎಂಬುವವರೇ ಮೊಸಳೆ ದಾಳಿಗೆ ತುತ್ತಾದ ದುರ್ದೈವಿ. ಭಾನುವಾರ ಬೆಳಿಗ್ಗೆ ಸುಮಾರು 8 ಗಂಟೆ ಸುಮಾರಿಗೆ ಅವರು ಶೌಚಕ್ಕಾಗಿ ನದಿಯತ್ತ ತೆರಳಿದ್ದಾಗ ಈ ದುರ್ಘಟನೆ ನಡೆದಿದೆ. ನದಿಯ ದಡದಲ್ಲಿದ್ದ ಆನಂದ್ ಅವರ ಮೇಲೆ ಮೊಸಳೆ ದಿಢೀರ್ ದಾಳಿ ಮಾಡಿದೆ.

ದಾಳಿಗೆ ಸಿಲುಕಿದ ಆನಂದ್ ಅವರು ಪ್ರಾಣಭಯದಿಂದ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾರೆ. ಅವರ ಕಿರುಚಾಟ ಕೇಳಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ಹರಸಾಹಸ ಪಟ್ಟು ಆನಂದ್ ಅವರನ್ನು ಮೊಸಳೆಯ ಬಾಯಿಯಿಂದ ರಕ್ಷಿಸಿದ್ದಾರೆ. ಈ ಭೀಕರ ದಾಳಿಯಲ್ಲಿ ಆನಂದ್ ಅವರ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ದೇಹದ ಇತರೆ ಭಾಗಗಳಿಗೂ ಗಾಯಗಳಾಗಿವೆ.

ಗಾಯಗೊಂಡ ಆನಂದ್ ಅವರನ್ನು ತಕ್ಷಣವೇ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ, ಗಾಯದ ತೀವ್ರತೆ ಹೆಚ್ಚಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಧಾರವಾಡದ ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿದ ಕೂಡಲೇ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಮತ್ತೆ ಶುರುವಾದ ಆತಂಕ: ಕಾಳಿ ನದಿಯಲ್ಲಿ ಮೊಸಳೆಗಳ ಹಾವಳಿ ಹೊಸದೇನಲ್ಲ. ಆದರೆ, ಕಳೆದ ಎರಡು ವರ್ಷಗಳಿಂದ ಈ ನಿರ್ದಿಷ್ಟ ಪ್ರದೇಶದಲ್ಲಿ ಮೊಸಳೆ ದಾಳಿ ಪ್ರಕರಣಗಳು ಕೊಂಚ ಕಡಿಮೆಯಾಗಿದ್ದವು. ಇದೀಗ ಮತ್ತೆ ಮೊಸಳೆ ಪ್ರತ್ಯಕ್ಷವಾಗಿ ವ್ಯಕ್ತಿಯ ಮೇಲೆ ದಾಳಿ ಮಾಡಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಭೀತಿ ಹಾಗೂ ಆತಂಕವನ್ನು ಮೂಡಿಸಿದೆ. ನದಿ ಪಾತ್ರದ ಜನತೆ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *