ದಾಂಡೇಲಿ: ಆನ್‌ಲೈನ್ ಹೂಡಿಕೆ (Online Investment) ಮಾಡಿ ಹೆಚ್ಚಿನ ಲಾಭ ಗಳಿಸುವ ಆಸೆಗೆ ಬಿದ್ದು ನಿವೃತ್ತ ರಕ್ಷಣಾ ಸೇವಾ ನೌಕರರೊಬ್ಬರು ಬರೋಬ್ಬರಿ ₹10.60 ಲಕ್ಷ ಕಳೆದುಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ. ಈ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಸೈಬರ್ ಕ್ರೈಂ (Cyber crime) ಪ್ರಕರಣ ದಾಖಲಾಗಿದೆ.
ದಾಂಡೇಲಿಯ ಸಾಯಿನಗರ ನಿವಾಸಿ, 66 ವರ್ಷದ ನಿವೃತ್ತ ಯೋಧ ದಿವಾಕರ ನಾರಾಯಣ ಎಂಬುವವರೇ ವಂಚನೆಗೊಳಗಾದ ದುರ್ದೈವಿ. ಅವರು ತಮ್ಮ ಪತ್ನಿಯೊಂದಿಗೆ ವಾಸವಾಗಿದ್ದು, ಎಸ್‌ಬಿಐ (SBI) ಬ್ಯಾಂಕ್‌ನಲ್ಲಿ ಜಂಟಿ ಖಾತೆ ಹೊಂದಿದ್ದಾರೆ.
ದೂರಿನ ಅನ್ವಯ, 2025ರಲ್ಲಿ ದಿವಾಕರ ಅವರ ಪತ್ನಿ ಫೇಸ್‌ಬುಕ್‌ನಲ್ಲಿ (Facebook) “ಹಣ ಹೂಡಿಕೆ ಮಾಡಿ ಡಾಲರ್ ರೂಪದಲ್ಲಿ ಹೆಚ್ಚಿನ ಲಾಭ ಪಡೆಯಿರಿ” ಎಂಬ ಸರ್ಕಾರಿ ಯೋಜನೆಯಂತೆ ಬಿಂಬಿತವಾಗಿದ್ದ ನಕಲಿ ಜಾಹೀರಾತನ್ನು ನೋಡಿದ್ದರು. ಆ ಲಿಂಕ್ ಕ್ಲಿಕ್ ಮಾಡಿ ತಮ್ಮ ವಿವರಗಳನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ, ವಿವಿಧ ಮೊಬೈಲ್ ಸಂಖ್ಯೆಗಳಿಂದ ಕರೆಗಳು ಮತ್ತು ವಾಟ್ಸಪ್ (WhatsApp) ಸಂದೇಶಗಳನ್ನು ಕಳುಹಿಸಿದ ವಂಚಕರು, ಹಣ ಹೂಡಿಕೆ ಮಾಡುವಂತೆ ನಿರಂತರವಾಗಿ ಪ್ರೇರೇಪಿಸಿದ್ದಾರೆ.
ವಂಚಕರು “quantro-ai.com” ಎಂಬ ನಕಲಿ ವೆಬ್‌ಸೈಟ್‌ಗೆ ಸಂಪರ್ಕ ಕಲ್ಪಿಸಿ, ಅದರಲ್ಲಿ ಖಾತೆ ತೆರೆಯುವಂತೆ ಸೂಚಿಸಿದ್ದರು. ಆರಂಭದಲ್ಲಿ ನೋಂದಣಿ ಶುಲ್ಕವಾಗಿ ₹10,000 ಮತ್ತು ₹12,000 ಪಡೆದುಕೊಂಡಿದ್ದರು. ಬಳಿಕ ನಕಲಿ ಲಾಭಾಂಶವನ್ನು ತೋರಿಸಿ ದಂಪತಿಯ ನಂಬಿಕೆ ಗಿಟ್ಟಿಸಿಕೊಂಡಿದ್ದರು.
ನಂತರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ, “ನಿಮ್ಮ ಲಾಭಾಂಶದ ಹಣ ಡಾಲರ್‌ನಲ್ಲಿದೆ, ಅದನ್ನು ರೂಪಾಯಿಗೆ ಪರಿವರ್ತಿಸಿ ಹಿಂತಿರುಗಿಸಲು ಪ್ರೊಸೆಸಿಂಗ್ ಶುಲ್ಕ ಪಾವತಿಸಬೇಕು” ಎಂದು ನಂಬಿಸಿದ್ದಾರೆ. ಈ ನೆಪವೊಡ್ಡಿ ಫೆಬ್ರವರಿಯಿಂದ ಏಪ್ರಿಲ್ ತನಕ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹10,60,436 ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಲಕ್ಷಾಂತರ ರೂಪಾಯಿ ಪಾವತಿಸಿದರೂ ಲಾಭದ ಹಣವೂ ಬಾರದೆ, ಹೂಡಿಕೆ ಮಾಡಿದ ಅಸಲು ಕೂಡ ವಾಪಸು ಸಿಗಲಿಲ್ಲ. ಈ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ, ತಾವು ಹಣ ಜಮೆ ಮಾಡಿದ ಖಾತೆಗಳು ‘ಸೈಬರ್ ಕ್ರೈಂ’ ವ್ಯವಹಾರಗಳಿಗೆ ಸಂಬಂಧಿಸಿವೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ತಾವು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಮೋಸಹೋಗಿರುವುದನ್ನು ಅರಿತ ದಿವಾಕರ ನಾರಾಯಣ ಅವರು, ತಕ್ಷಣ ದಾಂಡೇಲಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಕಲಂ 318(4) ಹಾಗೂ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ಕಲಂ 66(C), 66(D) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಂಚಕರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
