Spread the love

ಭಟ್ಕಳ: ನಗರದಲ್ಲಿ ತೀವ್ರ ಉದ್ವಿಗ್ನತೆಗೆ ಕಾರಣವಾಗಿರುವ ‘ಮೂರಿನಕಟ್ಟೆ’ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪನ್ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. “ಮೂಲ ಮೂರಿನಕಟ್ಟೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಅದನ್ನು ಯಾರೂ ಧ್ವಂಸಗೊಳಿಸಿಲ್ಲ” ಎಂದು ಅವರು ಛಾಯಾಚಿತ್ರಗಳ ಸಮೇತ ವಿವರಿಸಿದ್ದಾರೆ.

ಮೂರಿನಕಟ್ಟೆಯನ್ನು ಕೆಡವಲಾಗಿದೆ ಎಂಬ ಕೆಲವು ಸಂಘಟನೆಗಳ ಆರೋಪವನ್ನು ತಳ್ಳಿಹಾಕಿರುವ ಎಸ್ಪಿ, ಮೂಲ ಕಟ್ಟೆ ಇದ್ದ ಜಾಗದಲ್ಲೇ ಇದ್ದು, ಅದಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ದೃಢಪಡಿಸಿದ್ದಾರೆ.

ಅಂದು ನಡೆದಿದ್ದೇನು?

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಮೂಲ ಕಟ್ಟೆಯನ್ನು ಸ್ಥಳಾಂತರ ಮಾಡಲು ಆದೇಶಿಸಲಾಗಿತ್ತು. ಹಿಂದೂ ಕಾರ್ಯಕರ್ತರ ನಿರಂತರ ಹೋರಾಟದ ಬಳಿಕ, ಎನ್‌ಎಚ್‌ಎಐ (NHAI) ಸಿಬ್ಬಂದಿ ಪಕ್ಕದಲ್ಲೇ ಜಾಗ ಗುರುತಿಸಿ ಚೀರೆಕಲ್ಲಿನಿಂದ (ಲ್ಯಾಟರೈಟ್ ಕಲ್ಲು) ಹೊಸ ಪರ್ಯಾಯ ಕಟ್ಟೆಯನ್ನು ನಿರ್ಮಿಸುತ್ತಿದ್ದರು.

ಈ ಹೊಸ ಕಟ್ಟೆ ನಿರ್ಮಾಣದ ವಿಡಿಯೋವನ್ನು ಅನ್ಯ ಕೋಮಿನ ಯುವಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದನು. ವಿಡಿಯೋ ಹರಡುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಅನ್ಯ ಕೋಮಿನ ಯುವಕರ ಗುಂಪು, ಹೊಸದಾಗಿ ನಿರ್ಮಿಸುತ್ತಿದ್ದ ಪರ್ಯಾಯ ಕಟ್ಟೆಯನ್ನು ದೂಡಿಹಾಕಿ ಧ್ವಂಸಗೊಳಿಸಿದೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದ ಪೊಲೀಸರ ಮೇಲೆಯೇ ಗುಂಪು ಹಲ್ಲೆ ನಡೆಸಿ ಗಲಾಟೆ, ಸಂಘರ್ಷಕ್ಕೆ ಮುಂದಾಗಿದೆ.

ಮತ್ತೊಂದೆಡೆ, ಸಚಿವ ಮಾಂಕಾಳು ವೈದ್ಯ ಅವರಿಗೆ ಹಿಂದೂ ಕಾರ್ಯಕರ್ತರು ಮುತ್ತಿಗೆ ಹಾಕಿ ದಿಕ್ಕಾರ ಕೂಗಿದ್ದಾರೆ. ತಡರಾತ್ರಿ ಅದೇ ಸ್ಥಳದಲ್ಲಿ ಮರಳಿ ಕಟ್ಟೆ ನಿರ್ಮಿಸಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

4 ಎಫ್‌ಐಆರ್ ದಾಖಲು, 6 ಮಂದಿ ಅರೆಸ್ಟ್

ಈ ಗಲಭೆ ಮತ್ತು ಪುಂಡಾಟಿಕೆಗೆ ಸಂಬಂಧಿಸಿದಂತೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪೊಲೀಸರ ಮೇಲಿನ ಹಲ್ಲೆ, ಹೆದ್ದಾರಿ ತಡೆ, ವ್ಯಕ್ತಿಯ ಮೇಲಿನ ಹಲ್ಲೆ, ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ವಿಡಿಯೋ ಹರಿಬಿಟ್ಟ ಪ್ರಕರಣ ಸೇರಿ ಒಟ್ಟು 4 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣಗಳ ಅಡಿ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಇದುವರೆಗೆ ಒಟ್ಟು 6 ಮಂದಿಯನ್ನು ಬಂಧಿಸಿದ್ದಾರೆ.

ಬಿಗಿ ಪೊಲೀಸ್ ಭದ್ರತೆ, ನಿಷೇಧಾಜ್ಞೆ ಜಾರಿ

ಮುಂಜಾಗ್ರತಾ ಕ್ರಮವಾಗಿ ಹಾಗೂ ಭಟ್ಕಳದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ಭಟ್ಕಳ ಪಟ್ಟಣ ಪಂಚಾಯಿತಿ ಮತ್ತು ಜಾಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ (ಸೆಕ್ಷನ್ 144 / ಬಿಎನ್‌ಎಸ್‌ಎಸ್ 163) ಜಾರಿಗೊಳಿಸಲಾಗಿದೆ.

ಭದ್ರತೆಗಾಗಿ 9 ಕೆಎಸ್‌ಆರ್‌ಪಿ (KSRP), 3 ಡಿಎಆರ್ (DAR) ತುಕಡಿಗಳು ಸೇರಿದಂತೆ ಪಕ್ಕದ ಜಿಲ್ಲೆಗಳಿಂದಲೂ 300ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಸದ್ಯ ಪಟ್ಟಣದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದು, ಶಾಂತಿಯುತವಾಗಿದೆ ಎಂದು ಜಿಲ್ಲಾ ಎಸ್ಪಿ ದೀಪನ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *