Spread the love

ಅಂಕೋಲಾ: ರಸ್ತೆಯಲ್ಲಿ ಹೋಗುವಾಗ ಲಿಫ್ಟ್ (ಡ್ರಾಪ್) ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಾರವಾರದ ಪೊಲೀಸ್ ಕಾನ್ಸ್‌ಟೇಬಲ್ (PC) ಒಬ್ಬರು ಕಾರು ಚಾಲಕನಿಗೆ ಕರೆ ಮಾಡಿ ಬೆದರಿಕೆ ಹಾಕಿ, ದರ್ಪ ತೋರಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ನೊಂದ ಕಾರು ಚಾಲಕ ಇದೀಗ ಪೊಲೀಸ್ ಉನ್ನತಾಧಿಕಾರಿಗಳಿಗೆ (ಐಜಿಪಿ) ಅಧಿಕೃತವಾಗಿ ದೂರು ನೀಡಿದ್ದಾರೆ.

ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್ಸ್‌ಟೇಬಲ್ ಓರ್ವ ಅಧಿಕಾರ ದುರುಪಯೋಗಪಡಿಸಿಕೊಂಡು ಸಾರ್ವಜನಿಕರ ಮೇಲೆ ದರ್ಪ ತೋರಿದ ಆರೋಪ ಎದುರಿಸುತ್ತಿರುವವರು.

ಘಟನೆಯ ವಿವರ: ಬುಧವಾರ ಬೆಳಿಗ್ಗೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾನ್ಸ್‌ಟೇಬಲ್ ಪ್ರಸಾದ್ ಅವರು ಕಾರವಾರಕ್ಕೆ ತೆರಳಲು ವಾಹನಗಳ ಬಳಿ ಡ್ರಾಪ್ ಕೇಳುತ್ತಿದ್ದರು. ಇದೇ ವೇಳೆ ಅಂಕೋಲಾದಿಂದ ಕಾರವಾರದ ಕಡೆಗೆ ತೆರಳುತ್ತಿದ್ದ ಇನೋವಾ ಕಾರಿಗೆ ಅವರು ಕೈ ಮಾಡಿದ್ದಾರೆ. ಆದರೆ, ತಮಗೆ ಕೆಲಸಕ್ಕೆ ಹೋಗುವ ಅವಸರದಲ್ಲಿದ್ದ ಕಾರಣ ಕಾರು ಚಾಲಕ ವಾಹನವನ್ನು ನಿಲ್ಲಿಸದೇ ಮುಂದೆ ಸಾಗಿದ್ದಾರೆ.

ತಾನು ಕೈ ತೋರಿಸಿದರೂ ಕಾರು ನಿಲ್ಲಿಸಲಿಲ್ಲ ಎಂಬ ಅಹಂನಿಂದ ಕಾನ್ಸ್‌ಟೇಬಲ್, ಆ ಇನೋವಾ ಕಾರಿನ ನೋಂದಣಿ ಸಂಖ್ಯೆಯನ್ನು (Registration Number) ಬರೆದುಕೊಂಡಿದ್ದಾರೆ. ಬಳಿಕ ಆ ನಂಬರ್ ಆಧರಿಸಿ, ಇಲಾಖೆಯ ಮಾಹಿತಿಯ ಮೂಲಕ ಮಾಲೀಕರ/ಚಾಲಕನ ಮೊಬೈಲ್ ಸಂಖ್ಯೆ ಪತ್ತೆಹಚ್ಚಿ ಅವರಿಗೆ ಕರೆ ಮಾಡಿದ್ದಾರೆ. “ನಾನು ಕೈ ಮಾಡಿದರೂ ವಾಹನವನ್ನು ಏಕೆ ನಿಲ್ಲಿಸಲಿಲ್ಲ? ವಾಹನ ನಿಲ್ಲಿಸದಿದ್ದಕ್ಕೆ 5,000 ರೂಪಾಯಿ ಫೈನ್ ಹಾಕುತ್ತೇನೆ” ಎಂದು ಚಾಲಕನಿಗೆ ಫೋನಿನಲ್ಲೇ ತರಾಟೆಗೆ ತೆಗೆದುಕೊಂಡು ಧಮ್ಕಿ ಹಾಕಿದ್ದಾರೆ.

ಕಥೆ ಬದಲಿಸಿದ ಪೊಲೀಸಪ್ಪ 

ತಮ್ಮ ವೈಯಕ್ತಿಕ ಪ್ರಯಾಣಕ್ಕಾಗಿ ಡ್ರಾಪ್ ಕೇಳಲು ಕಾರು ನಿಲ್ಲಿಸಲು ಯತ್ನಿಸಿದ್ದ ಕಾನ್ಸ್‌ಟೇಬಲ್, ಚಾಲಕ ಎದುರು ಪ್ರಶ್ನಿಸುತ್ತಿದ್ದಂತೆ ಕಥೆ ಬದಲಿಸಿದ್ದಾರೆ. “ನಾನು ಅಲ್ಲಿ ವಾಹನ ತಪಾಸಣೆ ಮಾಡುತ್ತಿದ್ದೆ” ಎಂದು ಸುಳ್ಳು ಹೇಳಿದ್ದಾರೆ. ಚಾಲಕ ನೀವು ಯಾವ ಪೊಲೀಸ್ ಸ್ಟೇಷನ್ ಎಂದು ಕೇಳಿದರೂ ಉತ್ತರಿಸದ ಕಾನ್ಸ್‌ಟೇಬಲ್, ಹಟ್ಟಿಕೇರಿ ಬಳಿ ನಾನು ಒಬ್ಬನೇ ತಪಾಸಣೆ ನಡೆಸುತ್ತಿದ್ದೆ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾರೆ. ಕಾರವಾರ ನಗರ ಠಾಣೆಯ ಸಿಬ್ಬಂದಿಯೊಬ್ಬರು ಅಂಕೋಲಾ ತಾಲೂಕಿನ ಹಟ್ಟಿಕೇರಿ ವ್ಯಾಪ್ತಿಯಲ್ಲಿ, ಅದೂ ಒಬ್ಬಂಟಿಯಾಗಿ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸಲು ಕಾನೂನಿನಲ್ಲಿ ಅವಕಾಶವಿದೆಯೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಆಡಿಯೋ ವೈರಲ್, ಐಜಿಗೆ ದೂರು ಸಲ್ಲಿಕೆ 

ಕಾರು ಚಾಲಕನಿಗೆ ಕಾನ್ಸ್‌ಟೇಬಲ್ ದರ್ಪದ ಮಾತುಗಳನ್ನಾಡಿ, ಬೆದರಿಕೆ ಹಾಕಿರುವ ದೂರವಾಣಿ ಸಂಭಾಷಣೆಯ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಕೇವಲ ವೈಯಕ್ತಿಕ ಕಾರಣಕ್ಕೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಈ ಕಾನ್ಸ್‌ಟೇಬಲ್ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು ಎಂದು ನೊಂದ ಕಾರು ಚಾಲಕರು ಪೊಲೀಸ್ ಮಹಾನಿರ್ದೇಶಕರಿಗೆ (DG & IGP) ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *