Spread the love

ಅಂಕೋಲಾ: ತಾಲೂಕಿನ ಹೊಸಕಂಬಿ ವಲಯದ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿಗಾಗಿ ಅರಣ್ಯ ಇಲಾಖೆ ಅಳವಡಿಸಿದ್ದ ಬೆಲೆಬಾಳುವ ಕ್ಯಾಮೆರಾಗಳನ್ನು ಕದ್ದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಅಂಕೋಲಾ ತಾಲೂಕಿನ ಹಿಲ್ಲೂರು ಸಮೀಪದ ಕೋಳಗಿ ನಿವಾಸಿ, ಕೂಲಿ ಕಾರ್ಮಿಕನಾಗಿರುವ 54 ವರ್ಷದ ದುರ್ಗಾ ದೇವು ಹರಿಕಾಂತ್ರ ಬಂಧಿತ ಆರೋಪಿಯಾಗಿದ್ದು, ಆತನಿಂದ ಕಳುವಾಗಿದ್ದ ಕ್ಯಾಮೆರಾಗಳನ್ನು ಪೊಲೀಸರು ಸುರಕ್ಷಿತವಾಗಿ ವಶಪಡಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ: ಅಖಿಲ ಭಾರತ ಹುಲಿ ಗಣತಿಯ ಹಿನ್ನೆಲೆಯಲ್ಲಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದ ಮೇರೆಗೆ ಮೇ 1, 2026 ರಂದು ಹೊಸಕಂಬಿ ವಲಯ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದಲ್ಲಿ ‘ಕಡಿಬ್ಯಾಕ್’ (Cuddeback) ಕಂಪನಿಯ ಆಫ್‌ಲೈನ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ, ಮೇ 12ರ ಮಧ್ಯಾಹ್ನದಿಂದ ಮೇ 13ರ ಬೆಳಗಿನ ಜಾವದ ನಡುವಿನ ಅವಧಿಯಲ್ಲಿ ದುಷ್ಕರ್ಮಿಗಳು ಈ ಕ್ಯಾಮೆರಾಗಳನ್ನು ಕಳವು ಮಾಡಿದ್ದರು. ಈ ಕುರಿತು ಹಿಲ್ಲೂರು ಉಪ-ವಲಯ ಅರಣ್ಯಾಧಿಕಾರಿ ರಾಘವೇಂದ್ರ ಗುರುರಾಜ ಜಿರಗಾಳೆ ಅವರು ಮೇ 16ರಂದು ಅಂಕೋಲಾ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು. ದೂರಿನ ಅನ್ವಯ BNS-2023 ಕಲಂ 303(2) ರಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.

ಯಶಸ್ವಿ ಕಾರ್ಯಾಚರಣೆ: ಈ ಪ್ರಕರಣ ಭೇದಿಸಲು ಅಂಕೋಲಾ ಠಾಣೆಯಲ್ಲಿ ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗಿತ್ತು. ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ಈ ತಂಡವು, ಆರೋಪಿ ದುರ್ಗಾ ಹರಿಕಾಂತ್ರನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆ ವೇಳೆ ಆರೋಪಿಯು ತಾನೇ ಕ್ಯಾಮೆರಾ ಕದ್ದಿರುವುದನ್ನು ಒಪ್ಪಿಕೊಂಡಿದ್ದು, ಆತನಿಂದ ಅರಣ್ಯ ಇಲಾಖೆಗೆ ಸೇರಿದ ಅಮೂಲ್ಯ ಕ್ಯಾಮೆರಾಗಳನ್ನು ಜಪ್ತಿ ಮಾಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ., ಹಾಗೂ ಕಾರವಾರ ಡಿವೈಎಸ್ಪಿ ಗಿರೀಶ್ ಎಸ್.ವಿ. ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಅಂಕೋಲಾ ಸಿಪಿಐ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ, ತನಿಖಾಧಿಕಾರಿಗಳಾದ ಪಿಎಸ್‌ಐ ವಿಶ್ವನಾಥ ನಿಂಗೊಳ್ಳಿ, ಪಿಎಸ್‌ಐ ಲಲಿತಾ ರಜಪೂತ ಮತ್ತು ಸಿಬ್ಬಂದಿಗಳಾದ ಪ್ರಶಾಂತ ನಾಯ್ಕ, ಮಹಾದೇವ ಸಿದ್ದಿ, ಶೋಭಾ ನಾಯ್ಕ, ಭಗವಾನ್ ಗಾಂವಕರ್, ಆಸಿಫ್ ಆರ್.ಕೆ., ಹಾಗೂ ಗಿರೀಶ್ ಲಮಾಣಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ಪ್ರಕರಣವನ್ನು ತ್ವರಿತಗತಿಯಲ್ಲಿ ಭೇದಿಸಿ, ಅರಣ್ಯ ಇಲಾಖೆಯ ಸ್ವತ್ತನ್ನು ಮರಳಿ ತರುವಲ್ಲಿ ಯಶಸ್ವಿಯಾದ ಅಂಕೋಲಾ ಪೊಲೀಸರ ದಕ್ಷ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *