Spread the love

ಕಾರವಾರ: ನಗರದ ಮೀನು ಮಾರುಕಟ್ಟೆ ಪ್ರದೇಶದಲ್ಲಿ ಗೋವಾ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಅಕ್ರಮವಾಗಿ ಹಾಗೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗೋವಾ ಮೂಲದ ವ್ಯಕ್ತಿಯೊಬ್ಬನನ್ನು ಕಾರವಾರ ಶಹರ ಠಾಣೆ ಪೊಲೀಸರು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಗಣೇಶೋತ್ಸವದ ಹೆಸರಿನಲ್ಲಿ ಲಾಟರಿ ದಂಧೆ

ಗೋವಾ ರಾಜ್ಯದ ಪೊಂಡಾದಲ್ಲಿರುವ ಗಣೇಶೋತ್ಸವ ಸಮಿತಿಯೊಂದಕ್ಕೆ ಸಂಬಂಧಿಸಿದ ಲಾಟರಿ ಟಿಕೆಟ್‌ಗಳನ್ನು ಕಾರವಾರದಲ್ಲಿ ತಂದು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. 500 ರೂ. ಮುಖಬೆಲೆಯ ಈ ಟಿಕೆಟ್‌ಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಟಿಕೆಟ್ ಖರೀದಿಸಿದರೆ ದೊಡ್ಡ ಮೊತ್ತದ ಬಹುಮಾನ ಸಿಗಲಿದೆ ಎಂದು ಪ್ರಚಾರ ಮಾಡಿದ್ದ ಹಿನ್ನೆಲೆಯಲ್ಲಿ, ಬಹುಮಾನದ ಆಸೆಗೆ ಬಿದ್ದ ಸಾರ್ವಜನಿಕರು ಲಾಟರಿ ಖರೀದಿಸಲು ಮುಗಿಬಿದ್ದಿದ್ದರು ಎನ್ನಲಾಗಿದೆ.

ಪೊಲೀಸರ ಕಾರ್ಯಾಚರಣೆ, ಆರೋಪಿ ಸೆರೆ

ಮೀನು ಮಾರುಕಟ್ಟೆ ಬಳಿ ನಡೆಯುತ್ತಿದ್ದ ಈ ಅಕ್ರಮ ಲಾಟರಿ ಮಾರಾಟದ ಕುರಿತು ಖಚಿತ ಮಾಹಿತಿ ಪಡೆದ ಕಾರವಾರ ಶಹರ ಠಾಣಾ ಪೊಲೀಸರು, ಸ್ಥಳಕ್ಕೆ ತೆರಳಿ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರಿಗೆ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಗೋವಾ ಮೂಲದ ವಿನೋದ ಸುರೇಶ ವಾಂಗಲೆ (ಸುಮಾರು 35-40 ವರ್ಷ) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *