Spread the love

ವರ್ಗಾವಣೆಗಾಗಿ ಕಮಿಷನ್ ಹಾಗೂ ಹಿರಿಯ ಅಧಿಕಾರಿಗಳಿಗೆ ‘ಮಂತ್ಲಿ’ (ಮಾಸಿಕ ಲಂಚ) ನೀಡುವ ಕುರಿತು ಮಾತನಾಡಿದ್ದ ಆಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಮೂವರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳನ್ನು (ಪಿಎಸ್‌ಐ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೀಪನ್ ಎಂ.ಎನ್. ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಆಡಿಯೋದಲ್ಲಿ ಏನಿತ್ತು? ಜೆಡಿಎಸ್ ಪೇಜ್‌ನಲ್ಲಿ ವೈರಲ್ 

ಹಳಿಯಾಳ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ (L&O) ವಿಭಾಗದ ಪಿಎಸ್‌ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್‌ಐ ಕೃಷ್ಣ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಪಿಎಸ್‌ಐ ಆಗಿದ್ದ ವಿನೋದ್ ರೆಡ್ಡಿ ನಡುವೆ ನಡೆದಿದ್ದ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ಇತ್ತೀಚೆಗೆ ಜೆಡಿಎಸ್ ಪಕ್ಷದ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ವೈರಲ್ ಆಗಿತ್ತು. ಈ ಆಡಿಯೋದಲ್ಲಿ, ಎಲ್ ಅಂಡ್ ಒ (L&O) ಪಿಎಸ್‌ಐ ಸ್ಥಾನ ಪಡೆಯಲು ನಡೆದಿದ್ದ ಹಣದ ಡೀಲ್ ಹಾಗೂ ಪೊಲೀಸ್ ಇಲಾಖೆಯಲ್ಲಿ ಮೇಲಾಧಿಕಾರಿಗಳಿಗೆ ಪ್ರತಿ ತಿಂಗಳು ನೀಡಬೇಕಾದ ‘ಮಂತ್ಲಿ’ ಹಣದ ಬಗ್ಗೆ ಈ ಮೂವರು ಅಧಿಕಾರಿಗಳು ಬಹಿರಂಗವಾಗಿ ಮಾತನಾಡಿಕೊಂಡಿದ್ದರು. ಇದು ಪೊಲೀಸ್ ಇಲಾಖೆ ಹಾಗೂ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು.

ಎಎಸ್‌ಪಿ ನೇತೃತ್ವದಲ್ಲಿ ತನಿಖೆ, ಮೂವರ ತಲೆದಂಡ 

ಆಡಿಯೋ ಭಾರಿ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ, ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಎಎಸ್‌ಪಿ ಕೃಷ್ಣಮೂರ್ತಿ ಅವರು ನಡೆಸಿ ಸಲ್ಲಿಸಿದ ಪ್ರಾಥಮಿಕ ತನಿಖಾ ವರದಿಯ ಆಧಾರದ ಮೇಲೆ, ಇಲಾಖೆಯ ಶಿಸ್ತು ಮತ್ತು ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಎಸ್‌ಪಿ ದೀಪನ್ ಎಂ.ಎನ್. ಅವರು ಮೂವರೂ ಪಿಎಸ್‌ಐಗಳನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *