ಕುಮಟಾ: ತಾಲ್ಲೂಕಿನ ಗೋಕರ್ಣದ ಪ್ರಸಿದ್ಧ ಮುಖ್ಯ ಕಡಲತೀರದ ರಾಮತೀರ್ಥ ಬಳಿ ಬುಧವಾರ ಬೆಳಗ್ಗೆ ಬೆಂಗಳೂರು ಮೂಲದ ವೃದ್ಧರೊಬ್ಬರ ಶ*ವ ಪತ್ತೆಯಾಗಿದೆ. ಮೃತರನ್ನು ಬೆಂಗಳೂರು ಉತ್ತರದ ದಾಸರಹಳ್ಳಿ ನಿವಾಸಿ ಜೆ.ಎಸ್. ವೆಂಕಟೇಶ್ (68) ಎಂದು ಗುರುತಿಸಲಾಗಿದೆ.
ಮುಂಜಾನೆ ಸಮುದ್ರದ ನೀರಿನಲ್ಲಿ ಶವವೊಂದು ತೇಲಾಡುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು, ತಕ್ಷಣವೇ ಬೀಚ್ ಸೂಪರ್‌ವೈಸರ್‌ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅವರು ಗೋಕರ್ಣ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರಿಗೆ ಮಾಹಿತಿ ರವಾನಿಸುವಷ್ಟರಲ್ಲಿ ಶವವು ಅಲೆಗಳ ಅಬ್ಬರಕ್ಕೆ ಗೋಕರ್ಣದ ಮುಖ್ಯ ಕಡಲ ತೀರಕ್ಕೆ ಬಂದು ಬಿದ್ದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕರ್ತವ್ಯನಿರತ ಜೀವರಕ್ಷಕ (Lifeguards) ಸಿಬ್ಬಂದಿ, ಶವದ ಕಾಲಿಗೆ ಹಗ್ಗವನ್ನು ಕಟ್ಟಿ ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ. ಬಳಿಕ ಮೃತದೇಹವನ್ನು ಆಂಬ್ಯುಲೆನ್ಸ್‌ಗೆ ಸಾಗಿಸಲು ಪೊಲೀಸರಿಗೆ ನೆರವಾದರು.
ಗೋಕರ್ಣ ಠಾಣೆಯ ಪೊಲೀಸ್ ಸಿಬ್ಬಂದಿ, ಕರಾವಳಿ ಕಾವಲು ಪಡೆ (Coastal Guard) ಪೊಲೀಸರು, ಬೀಚ್ ಸೂಪರ್‌ವೈಸರ್ ರವಿ ನಾಯ್ಕ ಹಾಗೂ ಜೀವರಕ್ಷಕ ಸಿಬ್ಬಂದಿಗಳಾದ ರೋಷನ್ ಖಾರ್ವಿ, ಮೋಹನ ಅಂಬಿಗ ಮತ್ತು ಶಿವಪ್ರಸಾದ್ ಅಂಬಿಗ ಉಪಸ್ಥಿತರಿದ್ದು ಕಾರ್ಯಾಚರಣೆ ನಡೆಸಿದರು.
