Spread the love

ಅಂಕೋಲಾ: ಹಾರವಾಡ ಗ್ರಾಮ ಪಂಚಾಯತ್‌ನಲ್ಲಿ ಕಳೆದ ಆರು ವರ್ಷಗಳಿಂದ ಕಾರ್ಯದರ್ಶಿಯಾಗಿ (ಸೆಕ್ರೆಟರಿ) ಸೇವೆ ಸಲ್ಲಿಸಿದ ರಾಧಾಕೃಷ್ಣ ನಾಯಕ್ ಅವರನ್ನು ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ಸುಭಾಷ ನಾಯ್ಕ್ ಹಾಗೂ ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು. 

ತಮ್ಮ ಆರು ವರ್ಷಗಳ ಸೇವಾವಧಿಯಲ್ಲಿ ಪಂಚಾಯತ್ ವ್ಯಾಪ್ತಿಯ ವಿವಿಧ ಆಡಳಿತಾತ್ಮಕ ಕಾರ್ಯಗಳನ್ನು ಅತ್ಯಂತ ಸಮರ್ಪಕವಾಗಿ ಹಾಗೂ ಜವಾಬ್ದಾರಿಯುತವಾಗಿ ನಿರ್ವಹಿಸಿದ ರಾಧಾಕೃಷ್ಣ ನಾಯಕ್ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಗ್ರಾಮಸ್ಥರು ಸ್ಮರಿಸಿದರು. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಪಂಚಾಯತ್‌ನ ಎಲ್ಲಾ ಕಾರ್ಯಚಟುವಟಿಕೆಗಳಿಗೆ ನಿರಂತರ ಸಹಕಾರ ನೀಡಿದ ಅವರ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುಭಾಷ ನಾಯ್ಕ್, ರಾಧಾಕೃಷ್ಣ ನಾಯಕ್ ಅವರು ತಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಆಡಳಿತಾತ್ಮಕ ಜವಾಬ್ದಾರಿಗಳ ಜೊತೆಗೆ ಗ್ರಾಮಸ್ಥರೊಂದಿಗೆ ಅವರು ಅತ್ಯುತ್ತಮ ಬಾಂಧವ್ಯ ಹೊಂದಿದ್ದರು. ಗ್ರಾಮದ ಅಭಿವೃದ್ಧಿಗೆ ಹಾಗೂ ಸಾರ್ವಜನಿಕರಿಗೆ ಅವರು ನೀಡಿದ ಸೇವೆ ಹಾಗೂ ಸಹಕಾರವನ್ನು ಗ್ರಾಮಸ್ಥರು ಸದಾ ಸ್ಮರಿಸಲಿದ್ದಾರೆ ಎಂದು ಪ್ರಶಂಸಿದರು.

ಕಾರ್ಯಕ್ರಮದಲ್ಲಿ ರಾಧಾಕೃಷ್ಣ ನಾಯಕ್ ಅವರನ್ನು ಶಾಲು ಹೊದಿಸಿ, ಹೂಮಾಲೆ ಹಾಕಿ ಗೌರವಿಸಲಾಯಿತು. ಬಳಿಕ ಸ್ಮರಣಿಕೆ ನೀಡಿ ಅತ್ಯಂತ ಆತ್ಮೀಯವಾಗಿ ಬೀಳ್ಕೊಡಲಾಯಿತು. ಅವರ ಮುಂದಿನ ವೃತ್ತಿಜೀವನ ಹಾಗೂ ಸೇವಾ ಜೀವನ ಮತ್ತಷ್ಟು ಸುಖಕರ ಹಾಗೂ ಯಶಸ್ವಿಯಾಗಲಿ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಪ್ರಮೋದ್ ಗಾಂವಕರ್, ಪ್ರಶಾಂತ್ ಕಲಸ್, ಹೊನಪ್ಪ ಗೌಡ, ವೆಂಕು ಗೌಡ, ಸುಧಾಕರ್ ಗೌಡ, ಹಿರಾ ಗೌಡ, ನಾರಾಯಣ ಗೌಡ, ಗಣಪತಿ ಗೌಡ, ಪ್ರಭಾಕರ್ ಗೌಡ, ರಾಜು ಗೌಡ, ಮಂಗಲ್ ದಾಸ್ ಗೌಡ ಹಾಗೂ ಸುಜನ್ ನಾಯ್ಕ್ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *