Spread the love

​ಕಾರವಾರ: ​ಅಬಕಾರಿ ಇಲಾಖೆಯ ಗ್ರೂಪ್ ‘ಸಿ’ (Group C) ಸಿಬ್ಬಂದಿಗಳ ವರ್ಗಾವಣೆಗೆ 2025ರಲ್ಲಿ ಜಾರಿಗೆ ತರಲಾದ ಪಾರದರ್ಶಕ ‘ಕೌನ್ಸಿಲಿಂಗ್ ವರ್ಗಾವಣೆ ಪದ್ಧತಿ’ಯನ್ನೇ ಮುಂದುವರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಬಕಾರಿ ನಿರೀಕ್ಷಕರ ಸಂಘವು (ನೋಂ) ರಾಜ್ಯ ಅಬಕಾರಿ ಸಚಿವ ಕೆ. ಎಂ. ಶಿವಲಿಂಗೇಗೌಡರಿಗೆ ಬುಧವಾರ ಮನವಿ ಸಲ್ಲಿಸಿದೆ.

ಸದ್ಯ ಸರ್ಕಾರವು ಮತ್ತೆ ಹಳೆಯ ವರ್ಗಾವಣೆ ಪದ್ಧತಿಯನ್ನು ಜಾರಿಗೆ ತರಲು ಪರಿಶೀಲನೆ ನಡೆಸುತ್ತಿದೆ ಎಂಬ ಮಾಹಿತಿ ಕೇಳಿಬರುತ್ತಿದ್ದು, ಇದರಿಂದ ಇಲಾಖೆಯ ಸಿಬ್ಬಂದಿಗಳಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನ ಮೂಡಿದೆ. ಹಳೆಯ ಪದ್ಧತಿಯು ಸಿಬ್ಬಂದಿಯ ದಕ್ಷತೆಯನ್ನು ಕುಗ್ಗಿಸುವ ಸಾಧ್ಯತೆಯಿದೆ ಎಂದು ಸಂಘವು ಕಳವಳ ವ್ಯಕ್ತಪಡಿಸಿದೆ.

​ಕಳೆದ ವರ್ಷ ಜಾರಿಗೆ ಬಂದ ಕೌನ್ಸಿಲಿಂಗ್‌ ಆಧಾರಿತ ವರ್ಗಾವಣೆ ಪದ್ಧತಿಯು ಅತ್ಯಂತ ಪಾರದರ್ಶಕವಾಗಿದ್ದು, ಸಿಬ್ಬಂದಿಗಳ ಜೇಷ್ಠತೆ (Seniority) ಮತ್ತು ಕಾರ್ಯಕ್ಷಮತೆಗೆ ಸೂಕ್ತ ಗೌರವ ನೀಡುವಂತಿದೆ. ಹಳೆಯ ವರ್ಗಾವಣೆ ಪದ್ಧತಿಯಲ್ಲಿದ್ದ ಅನಿಶ್ಚಿತತೆ, ಮಧ್ಯವರ್ತಿಗಳ ಹಸ್ತಕ್ಷೇಪ ಹಾಗೂ ಭ್ರಷ್ಟಾಚಾರಕ್ಕೆ ಈ ಕೌನ್ಸಿಲಿಂಗ್ ವ್ಯವಸ್ಥೆಯು ಸಂಪೂರ್ಣವಾಗಿ ತಡೆ ನೀಡಿದೆ. ಕೌನ್ಸಿಲಿಂಗ್ ಮೂಲಕ ವರ್ಗಾವಣೆ ನಡೆಯುವುದರಿಂದ ಪ್ರತಿಯೊಬ್ಬ ಅಧಿಕಾರಿಗೆ ತಮಗೆ ಅರ್ಹವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ನ್ಯಾಯಯುತ ಅವಕಾಶ ಸಿಗಲಿದ್ದು, ಸಿಬ್ಬಂದಿಗೆ ಮಾನಸಿಕ ನೆಮ್ಮದಿ ಸಿಗುವಂತಾಗಲಿದೆ. ಅನಗತ್ಯ ಒತ್ತಡಗಳಿಂದ ಮುಕ್ತರಾಗಿ ಇಲಾಖೆಯ ಕೆಲಸ ಕಾರ್ಯಗಳಲ್ಲಿ ಹಾಗೂ ಸರ್ಕಾರದ ರಾಜಸ್ವ ಸಂಗ್ರಹಣೆಯಲ್ಲಿ (Revenue Collection) ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಹಳೆಯ ಪದ್ಧತಿಯನ್ನು ಮರುಜಾರಿ ಮಾಡುವ ಬದಲು, 2025ರ ಅಬಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ವರ್ಗಾವಣೆ ಮಾರ್ಗಸೂಚಿಗಳಲ್ಲಿನ ಕೆಲವೊಂದು ಅಂಶಗಳನ್ನು ಮಾತ್ರ ಪುನರ್ ಪರಿಶೀಲಿಸುವಂತೆ ಸಂಘ ಆಗ್ರಹಿಸಿದೆ. ಪ್ರಮುಖವಾಗಿ, ‘ಸ್ವಂತ ಜಿಲ್ಲೆ ವರ್ಗಾವಣೆ’ ಹಾಗೂ ಲೋಕಾಯುಕ್ತ ಅಥವಾ ಇಲಾಖಾ ವಿಚಾರಣೆ ಎದುರಿಸುತ್ತಿರುವ ಪ್ರಕರಣಗಳಲ್ಲಿ ‘ಕಾರ್ಯನಿರ್ವಾಹಕೇತರ ಹುದ್ದೆಗೆ ವರ್ಗಾವಣೆ’ ಮಾಡುವ ನಿಯಮಗಳನ್ನು ಪರಿಶೀಲಿಸಿ ಸೂಕ್ತ ತಿದ್ದುಪಡಿ ತರಬೇಕು. ಆದರೆ ಸಿಬ್ಬಂದಿಗಳ ಹಿತದೃಷ್ಟಿಯಿಂದ ಹಾಗೂ ಇಲಾಖೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಕೌನ್ಸಿಲಿಂಗ್ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜ್ಞಾನಪ್ರಕಾಶ್ ಬಿ., ಉಪಾಧ್ಯಕ್ಷ ಸದಾಶಿವ ಕೊರ್ತಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾ‌ರ್ ಸಿ.ಎಂ., ಖಜಾಂಚಿ ಆರ್.ಓ. ಸುರೇಶ್, ಜಂಟಿ ಕಾರ್ಯದರ್ಶಿ ರಂಗಯ್ಯ ಎಂ.ಪಿ., ಸಂಘಟನಾ ಕಾರ್ಯದರ್ಶಿ ಸುನೀಲ್ ಎಂ.ಬಿ., ಹಾಗೂ ವಿಭಾಗೀಯ ಉಪಾಧ್ಯಕ್ಷರುಗಳಾದ ಮಹದೇವ ಪೂಜಾರಿ, ಸರಸ್ವತಿ, ಮಹೇಶ ಪಾಟೀಲ್, ಎಂ.ಎಸ್. ನಾಯ್ಕ ಸೇರಿದಂತೆ ಸಂಘದ ಹಲವು ನಿರ್ದೇಶಕರು ಈ ಮನವಿಗೆ ಸಹಿ ಹಾಕಿದ್ದು, ಸರ್ಕಾರದ ಸಕಾರಾತ್ಮಕ ಸ್ಪಂದನೆಗೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *