ಅಂಕೋಲಾ: ಕ್ರಷರ್ ಬಳಿ ಬೋಡ್ರಸ್ ಅನಲೋಡ್ ಮಾಡಲು ನಿಲ್ಲಿಸಿದ್ದ ಡಂಪರ್ ವಾಹನ ಏಕಾಏಕಿ ಇಳಿಜಾರಿನಲ್ಲಿ ಚಲಿಸಿ ಚಾಲಕನ ಮೇಲೆಯೇ ಹರಿದ ಪರಿಣಾಮ ಚಾಲಕ ಸ್ಥಳದಲ್ಲೇ ಮೃ*ತಪಟ್ಟಿರುವ ದಾರುಣ ಘಟನೆ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದಿದೆ.
ಮೃ*ತರನ್ನು ಹಟ್ಟಿಕೇರಿ ನಿವಾಸಿ ಮಾರುತಿ ರಾಮಚಂದ್ರ ನಾಯ್ಕ (51) ಎಂದು ಗುರುತಿಸಲಾಗಿದೆ. ಘಟನೆ ಕುರಿತು ಮೃ*ತರ ಸಂಬಂಧಿ ಜಗದೀಶ ಗೋವಿಂದ ನಾಯ್ಕ (49) ಅವರು ಅಂಕೋಲಾ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ BNS 2023ರ ಕಲಂ 106(1) ರಂತೆ ಪ್ರಕರಣ ದಾಖಲಾಗಿದೆ.
ದೂರುದಾರರ ಪ್ರಕಾರ, ಮಾರುತಿ ರಾಮಚಂದ್ರ ನಾಯ್ಕ ಅವರು ರಾಜು ಕಳಸ್ ಎಂಬವರಿಗೆ ಸೇರಿದ KA-30/A-1223 ನೋಂದಣಿ ಸಂಖ್ಯೆಯ ಡಂಪರ್ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 25ರಂದು ಸಂಜೆ ಸುಮಾರು 5:15ರ ವೇಳೆಗೆ ಡಂಪರ್‌ನಲ್ಲಿ ಬೋಡ್ರಸ್ ತುಂಬಿಕೊಂಡು ರಾಜು ಕಳಸ್ ಅವರ ಕ್ರಷರ್‌ಗೆ ತೆರಳಿದ್ದರು.
ಕ್ರಷರ್‌ನಲ್ಲಿ ಬೋಡ್ರಸ್ ಅನಲೋಡ್ ಮಾಡಲು ವಾಹನವನ್ನು ಕ್ರಷರ್ ಮಷೀನ್‌ನ ಮೇಲ್ಭಾಗಕ್ಕೆ ಕೊಂಡೊಯ್ದು ನಿಲ್ಲಿಸಲಾಗಿತ್ತು. ಆದರೆ ಬೋಡ್ರಸ್ ಅನಲೋಡ್ ಮಾಡುವ ಸ್ಥಳವನ್ನು ಸಮತಟ್ಟು ಮಾಡದೆ ಇಳಿಜಾರಿನಿಂದ ಕೂಡಿದ ಪ್ರದೇಶದಲ್ಲೇ ವಾಹನ ನಿಲ್ಲಿಸಲಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಹಾಗೂ ಅನಲೋಡ್ ಮಾಡುವ ಸಂದರ್ಭದಲ್ಲಿ ಸಹಾಯಕ್ಕೆ ಯಾವುದೇ ವ್ಯಕ್ತಿಯನ್ನು ನೇಮಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಾರುತಿ ನಾಯ್ಕ ಅವರು ಇಳಿಜಾರಿನ ರಸ್ತೆಯಲ್ಲಿ ಡಂಪರ್ ನಿಲ್ಲಿಸಿ ಬೋಡ್ರಸ್ ಅನಲೋಡ್ ಮಾಡಿದ ಬಳಿಕ ವಾಹನದಿಂದ ಕೆಳಗಿಳಿದು ಅದರ ಮುಂಭಾಗದಲ್ಲಿ ನಿಂತಿದ್ದರು. ಈ ವೇಳೆ ಡಂಪರ್ ಏಕಾಏಕಿ ಇಳಿಜಾರಿನ ಮಣ್ಣಿನ ರಸ್ತೆಯಲ್ಲಿ ಚಲಿಸಿ ಮಾರುತಿ ನಾಯ್ಕ ಅವರಿಗೆ ಡಿಕ್ಕಿ ಹೊಡೆದಿದೆ. ಬಳಿಕ ವಾಹನ ಅವರ ಮೈಮೇಲೆ ಹರಿದ ಪರಿಣಾಮ ಕಾಲು, ಮುಖ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಕಾರಣವಾದ ನಿರ್ಲಕ್ಷ್ಯ ಹಾಗೂ ಸುರಕ್ಷತಾ ಕ್ರಮಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.
