Spread the love

ಸಿದ್ದಾಪುರ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ವಾರ್ಷಿಕ ಘಟಿಕೋತ್ಸವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತ್ಯಾರ್ಸಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ರಚನಾ ಪ್ರಕಾಶ ಗೌಡರ್ ಅವರು ರಾಜ್ಯಪಾಲರಿಂದ ಪ್ರತಿಷ್ಠಿತ ಬಂಗಾರದ ಪದಕವನ್ನು (ಗೋಲ್ಡ್ ಮೆಡಲ್) ಪಡೆದುಕೊಂಡು ಅಪರೂಪದ ಸಾಧನೆ ಮಾಡಿದ್ದಾರೆ. 

ದಾವಣಗೆರೆಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ & ಪ್ರೊಡಕ್ಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಭ್ಯಾಸ ನಡೆಸಿದ್ದ ರಚನಾ, ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಗಳಿಸುವ ಮೂಲಕ ಕಾಲೇಜು ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಬೆಳಗಾವಿಯ ಜ್ಞಾನಸಂಗಮ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆದ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರತಿಭಾವಂತೆ ರಚನಾ ಅವರಿಗೆ ಪದವಿ ಪ್ರಮಾಣಪತ್ರ ಹಾಗೂ ಚಿನ್ನದ ಪದಕವನ್ನು ಪ್ರದಾನ ಮಾಡಿ ಗೌರವಿಸಿದರು. ವೇದಿಕೆಯಲ್ಲಿದ್ದ ಗಣ್ಯರು ವಿದ್ಯಾರ್ಥಿನಿಯ ಶ್ರಮ ಹಾಗೂ ಶೈಕ್ಷಣಿಕ ಸಾಧನೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಸಾಧಕಿ ರಚನಾ ಅವರು ಸಿದ್ದಾಪುರ ತಾಲೂಕಿನ ತ್ಯಾರ್ಸಿಯ ಪ್ರಕಾಶ ಗೌಡ ಹಾಗೂ ರೇಖಾ ದಂಪತಿಯ ಪುತ್ರಿಯಾಗಿದ್ದಾರೆ. ಗ್ರಾಮೀಣ ಭಾಗದ ಹಿನ್ನೆಲೆಯಿಂದ ಬಂದು ಕಠಿಣ ಪರಿಶ್ರಮದಿಂದ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಮಟ್ಟದ ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕ ಮುಡಿಗೇರಿಸಿಕೊಂಡ ರಚನಾ ಅವರ ಮಹೋನ್ನತ ಸಾಧನೆಗೆ ಪಾಲಕರು, ಕುಟುಂಬಸ್ಥರು, ಶಿಕ್ಷಕರು, ಸ್ನೇಹಿತರು, ಹಿತೈಷಿಗಳು ಹಾಗೂ ತ್ಯಾರ್ಸಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಮತ್ತು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *