Spread the love

ಕಾರವಾರ: ಸಾಲ ಪಡೆಯದಿದ್ದರೂ ಸಾಲ ಪಡೆದಿರುವುದಾಗಿ ಹೇಳಿ, ಬಡ್ಡಿ ಸಮೇತ ಹಣ ಪಾವತಿಸುವಂತೆ ಬೆದರಿಸಿ ಮಹಿಳೆಯೊಬ್ಬರಿಂದ ಬರೋಬ್ಬರಿ 6,28,898 ಹಣ ವಸೂಲಿ ಮಾಡಿರುವ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದಾಪುರ ಮೂಲದ ವೀಣಾ ಕಿರಣಕುಮಾರ ವಂಚನೆಗೊಳಗಾದ ಮಹಿಳೆಯಾಗಿದ್ದಾರೆ.

ನಕಲಿ ಲೋನ್ ಆ್ಯಪ್ ಜಾಲಕ್ಕೆ ಸಿಲುಕಿದ್ದು ಹೇಗೆ? 

2026ರ ಜೂನ್ 1ರಂದು ವೀಣಾ ಅವರು ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ‘Furtila Rupee App’ ಹೆಸರಿನ ಸಾಲದ ಆ್ಯಪ್ ಕಾಣಿಸಿಕೊಂಡಿದೆ. ಅದರ ಮೇಲೆ ಕ್ಲಿಕ್ ಮಾಡಿದ ಬಳಿಕ ಮೊಬೈಲ್‌ಗೆ ಬಂದ ನೋಟಿಫಿಕೇಶನ್‌ಗಳಿಗೆ ಅನುಮತಿ ನೀಡಿದಾಗ, ಅವರ ಫೋನ್‌ನಲ್ಲಿ ‘Timely Cash’ ಹೆಸರಿನ ಲೋನ್ ಆ್ಯಪ್ ವ್ಯಾಲೆಟ್ ಡೌನ್‌ಲೋಡ್ ಆಗಿದೆ. ಅದರಲ್ಲಿ 3,000 ಸಾಲ ಮಂಜೂರಾಗಿರುವುದಾಗಿ ತೋರಿಸಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿದೇಶಿ ಸಂಖ್ಯೆಗಳಿಂದ ಕರೆ ಮಾಡಿ ಮಾನಹಾನಿ ಬೆದರಿಕೆ:

ಜೂನ್ 3ರಂದು ಅಪರಿಚಿತ ವ್ಯಕ್ತಿಯೊಬ್ಬರು +62 88705415220 ಸಂಖ್ಯೆಯಿಂದ ಕರೆ ಮಾಡಿ, ತಾನು ‘Furtila Rupee App’ ಕಂಪನಿಯಿಂದ ಮಾತನಾಡುತ್ತಿರುವುದಾಗಿ ಹೇಳಿದ್ದಾರೆ. ಆ್ಯಪ್ ಮೂಲಕ ಸಾಲ ಪಡೆದಿದ್ದು, ಅಸಲು ಮತ್ತು ಬಡ್ಡಿ ಸೇರಿ ಒಟ್ಟು 32,000 ಪಾವತಿಸುವಂತೆ ಸೂಚಿಸಿದ್ದಾರೆ. ತಾನು ಯಾವುದೇ ಸಾಲ ಪಡೆದಿಲ್ಲ ಎಂದು ಮಹಿಳೆ ಸ್ಪಷ್ಟಪಡಿಸಿದರೂ ಆರೋಪಿಗಳು ಕೇಳಲಿಲ್ಲ.

ಬಳಿಕ +92 3258708985 ಮತ್ತು +628812424275 ಸೇರಿದಂತೆ ವಿವಿಧ ಸಂಖ್ಯೆಗಳಿಂದ ಪ್ರತಿದಿನ ಕರೆ ಮಾಡಿದ ಆರೋಪಿತರು, ಹಣ ಪಾವತಿಸದಿದ್ದರೆ ಮೊಬೈಲ್‌ನಲ್ಲಿರುವ ಎಲ್ಲ ಸಂಪರ್ಕ ಸಂಖ್ಯೆಗಳಿಗೆ ಸಾಲ ಬಾಕಿ ಇರುವ ಬಗ್ಗೆ ಸಂದೇಶ ಕಳುಹಿಸಿ ಮಾನ-ಮರ್ಯಾದೆಗೆ ಧಕ್ಕೆ ತರುವುದಾಗಿ ಬೆದರಿಸಿ ಮಾನಸಿಕ ಹಿಂಸೆ ನೀಡಿದ್ದಾರೆ.

ಸಂಬಂಧಿಕರು ಹಾಗೂ ಸ್ನೇಹಿತರ ಮುಂದೆ ಮಾನಹಾನಿಯಾಗಬಹುದೆಂಬ ಭಯದಿಂದ ಮಹಿಳೆಯು 2026ರ ಜೂನ್ 3ರಿಂದ ಅಕ್ಟೋಬರ್ 21ರವರೆಗೆ ಆರೋಪಿತರು ನೀಡಿದ ಬ್ಯಾಂಕ್ ಖಾತೆ ಮತ್ತು ಯುಪಿಐ ಐಡಿಗಳಿಗೆ ಹಂತ ಹಂತವಾಗಿ ಒಟ್ಟು 6,28,898 ಹಣ ಜಮಾ ಮಾಡಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು: 

ಘಟನೆ ಕುರಿತು ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 27/2026ರಡಿ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 319(2), 318(4), 351(2) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಕಲಂ 66(2)(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *