Spread the love

ಹಳಿಯಾಳ: ಮೋಟಾರ್ ಸೈಕಲ್‌ನ ಸೈಡ್ ಹುಕ್‌ಗೆ ನೇತುಹಾಕಿದ್ದ ಬಟ್ಟೆ ಚೀಲವನ್ನು ಖದೀಮರು ಏಕಾಏಕಿ ಕಳವು ಮಾಡಿದ್ದು, ಚೀಲದಲ್ಲಿದ್ದ 1 ಲಕ್ಷ ರೂ. ನಗದು ಹಾಗೂ ಬ್ಯಾಂಕ್‌ನ ಪ್ರಮುಖ ದಾಖಲೆಗಳು ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.

ಧಾರವಾಡ ರಸ್ತೆಯ ಜಡ್ಜ್ ಕ್ವಾರ್ಟರ್ಸ್ ನಿವಾಸಿಯಾಗಿರುವ ಖಾಸಗಿ ವೈದ್ಯ 58 ವರ್ಷದ ಬಂಡು ರಾಮು ಡಿಗ್ರಜೆ ಅವರು ಹಣ ಕಳೆದುಕೊಂಡವರು. ಅಕ್ಟೋಬರ್ 19ರಂದು ಮಧ್ಯಾಹ್ನ 3.25 ರಿಂದ 3.40ರ ನಡುವಿನ ಅವಧಿಯಲ್ಲಿ ಬಂಡು ಡಿಗ್ರಜೆ ಅವರು ತಮ್ಮ ಬೈಕ್‌ನ ಎಡಬದಿಯ ಸೈಡ್ ಹುಕ್‌ಗೆ ಬಟ್ಟೆ ಚೀಲವೊಂದನ್ನು ನೇತುಹಾಕಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಕಳ್ಳರು ಚೀಲವನ್ನು ಎಗರಿಸಿದ್ದಾರೆ. ಕಳುವಾದ ಚೀಲದಲ್ಲಿ 1 ಲಕ್ಷ ರೂ. ನಗದು ಹಣ, ಬ್ಯಾಂಕ್ ಪಾಸ್‌ಬುಕ್ ಹಾಗೂ ಚೆಕ್‌ಬುಕ್ ಇತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಬಂಡು ಡಿಗ್ರಜೆ ಅವರು ನೀಡಿದ ದೂರಿನ ಮೇರೆಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2)ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *