Spread the love

ಕಾರವಾರ: ಯುವ ಜನತೆಯನ್ನು ಹಾಗೂ ದೇಶದ ಭವಿಷ್ಯವನ್ನು ಹಾಳು ಮಾಡುವ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವುದು ಮತ್ತು ಇದರ ವಿರುದ್ಧ ಹೋರಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಹೇಳಿದರು.

ಅವರು ಸೋಮವಾರ ರವೀಂದ್ರನಾಥ್ ಠಾಗೋರ್ ಕಡಲತೀರದ ಮಯೂರ ವರ್ಮಾ ವೇದಿಕೆಯಲ್ಲಿ, ಕಾರವಾರಕ್ಕೆ ಆಗಮಿಸಿದ ‘ಮಾದಕ ವಸ್ತುಗಳ ವಿರುದ್ಧ ಹೋರಾಟದ ಜಾಗೃತಿಯ ಏಕತಾ ಪರೇಡ್ ಮತ್ತು ಮೋಟರ್ ಸೈಕಲ್ ರಾಷ್ಟ್ರೀಯ ರ‍್ಯಾಲಿ-2026’ ತಂಡಗಳನ್ನು ಸ್ವಾಗತಿಸಿ, ಆಯೋಜಿಸಲಾದ ವೇದಿಕೆ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು.

ಒನ್ ನೇಶನ್, ಒನ್ ರೈಡ್, ಡ್ರಗ್ಸ್ ಫ್ರೀ ಇಂಡಿಯಾ ಅಭಿಯಾನ:

ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ‘ಒನ್ ನೇಶನ್, ಒನ್ ರೈಡ್, ಡ್ರಗ್ಸ್ ಫ್ರೀ ಇಂಡಿಯಾ’ ಅಭಿಯಾನದಡಿ ಕೇರಳ, ಲಕ್ಷದ್ವೀಪ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಶಾಲಾ, ಕಾಲೇಜು, ಕಚೇರಿಗಳಲ್ಲಿ ಕಾರ್ಯಕ್ರಮ ಮಾಡುವ ಮೂಲಕ ಸಮಾಜಕ್ಕೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಾ. ದಿಲೀಷ್ ಶಶಿ ವಿವರಿಸಿದರು.

2030 ರೊಳಗೆ ಡ್ರಗ್ಸ್ ಮುಕ್ತ ಭಾರತ ಗುರಿ:

ಕೆಎಸ್‌ಆರ್‌ಪಿಯ ಡೆಪ್ಯೂಟಿ ಕಮಾಂಡೆಂಟ್ ಚಂದ್ರಶೇಖರ್ ಮಾತನಾಡಿ, 2030 ರೊಳಗೆ ಡ್ರಗ್ಸ್ ಮುಕ್ತ ಭಾರತವನ್ನು ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. “ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಹಾವಳಿ ಆತಂಕಕಾರಿಯಾಗಿ ಬೆಳೆಯುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಜನರು ಹಾಗೂ ಗೃಹಿಣಿಯರೂ ಇದರ ದುಷ್ಪರಿಣಾಮಕ್ಕೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯ ಭವಿಷ್ಯವನ್ನೇ ಅಷ್ಟೇ ಅಲ್ಲದೆ, ಕುಟುಂಬದ ನೆಮ್ಮದಿ ಹಾಗೂ ದೇಶದ ಭವಿಷ್ಯನ್ನೂ ಹಾಳುಮಾಡುವ ಗಂಭೀರ ಪಿಡುಗಾಗಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಯುವಜನರು ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗದಂತೆ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂದು ಅವರು ಸಲಹೆ ನೀಡಿದರು. “ಸ್ನೇಹಿತರ ಒತ್ತಡಕ್ಕೆ ಒಳಗಾಗಿ ಮದ್ಯಪಾನ, ಸಿಗರೇಟ್ ಅಥವಾ ಇತರ ಮಾದಕ ವಸ್ತುಗಳನ್ನು ಸೇವಿಸುವುದು ಧೈರ್ಯ ಅಥವಾ ಶೌರ್ಯದ ಸಂಕೇತವಲ್ಲ. ಇಂತಹ ಆಮಿಷಗಳು ಆರಂಭದಲ್ಲಿ ತಾತ್ಕಾಲಿಕ ಸಂತೋಷ ನೀಡಿದರೂ, ಕ್ರಮೇಣ ವ್ಯಸನಕ್ಕೆ ದೂಡಿ ಶಿಕ್ಷಣ, ಉದ್ಯೋಗ, ಕುಟುಂಬ ಹಾಗೂ ವೈಯಕ್ತಿಕ ಜೀವನವನ್ನು ಹಾಳುಮಾಡುತ್ತದೆ. ಇಂತಹ ಆಮಿಷಗಳಿಗೆ ಒಳಗಾಗದೇ, ಮಾದಕ ವಸ್ತುಗಳಿಂದ ದೂರವಿದ್ದು ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು” ಎಂದು ಚಂದ್ರಶೇಖರ್ ಎಚ್ಚರಿಸಿದರು.

ಸಾರ್ವಜನಿಕರ ಸಹಕಾರ ಅತ್ಯಗತ್ಯ:

ಯಾರಾದರೂ ಮಾದಕ ವಸ್ತುಗಳನ್ನು ಸೇವಿಸುವಂತೆ ಒತ್ತಾಯಿಸಿದರೆ ಅಥವಾ ಇಂತಹ ವಸ್ತುಗಳನ್ನು ಪೂರೈಸಲು ಮುಂದಾದರೆ ಅದನ್ನು ದೃಢವಾಗಿ ನಿರಾಕರಿಸಬೇಕು ಎಂದು ಅವರು ಒತ್ತಾಯಿಸಿದರು. ಶಾಲಾ-ಕಾಲೇಜುಗಳು ಅಥವಾ ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಪೂರೈಕೆ ನಡೆಯುತ್ತಿರುವುದು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು. ಸಾರ್ವಜನಿಕರು ನೀಡುವ ಮಾಹಿತಿಯಿಂದ ಅನೇಕ ಕುಟುಂಬಗಳು ವ್ಯಸನದ ಪರಿಣಾಮಗಳಿಂದ ಪಾರಾಗಲು ನೆರವಾಗಬಹುದು ಎಂದು ಅವರು ಹೇಳಿದರು.

ಕೇಂದ್ರ ಗೃಹ ಸಚಿವಾಲಯದಿಂದ ಮಾದಕ ವಸ್ತುಗಳ ಹಾವಳಿ ಹಾಗೂ ಅದರ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದೇಶವ್ಯಾಪಿ ಈ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 16 ರಂದು ಆರಂಭವಾದ ಈ ಜಾಗೃತಿ ಬೈಕ್ ರ‍್ಯಾಲಿ ಸೋಮವಾರ ಕಾರವಾರ ತಲುಪಿದೆ. ಲಕ್ಷದ್ವೀಪ ಮತ್ತು ಕೇರಳದ ಪೊಲೀಸ್ ತಂಡಗಳು ಈಗಾಗಲೇ ಅಭಿಯಾನದಲ್ಲಿ ಸೇರಿಕೊಂಡಿದ್ದು, ಹೈದರಾಬಾದ್, ತೆಲಂಗಾಣ, ಮಹಾರಾಷ್ಟ್ರ ಹಾಗೂ ತಮಿಳುನಾಡು ಭಾಗಗಳಿಂದಲೂ ಪೊಲೀಸ್ ತಂಡಗಳು ಭಾಗವಹಿಸುತ್ತಿವೆ. ಈ ರ್ಯಾಲಿ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜಕರಿಗೆ ಅರಿವು ಮೂಡಿಸಲಾಗುತಿದ್ದು, ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಜಾಗೃತಿ, ಮುನ್ನೆಚ್ಚರಿಕೆ ಮೂಲಕ ಈ ಪಿಡುಗನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಚಂದ್ರಶೇಖರ್ ತಿಳಿಸಿದರು.

ಸಮಾಜಕ್ಕೆ ಡ್ರಗ್ಸ್ ಕ್ಯಾನ್ಸರ್ ಇದ್ದಂತೆ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಎಂ.ಎನ್ ಮಾತನಾಡಿ, “ಸಮಾಜಕ್ಕೆ ಡ್ರಗ್ಸ್ ಎಂಬುವುದು ಕ್ಯಾನ್ಸರ್ ಇದ್ದಂತೆ. ಸಾಹಸ ಮತ್ತು ಕುತೂಹಲಕ್ಕೆ ಯಾವುದೇ ಮಾದಕ ವಸ್ತುಗಳನ್ನು ಒಮ್ಮೆ ಪ್ರಯೋಗಿಸಿ ನೋಡಬೇಕೆಂಬ ಮನೋಭಾವ ಯುವಜನರನ್ನು ವ್ಯಸನದ ಸುಳಿಗೆ ತಳ್ಳಬಹುದು. ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯ ಸ್ವಯಂ ನಿಯಂತ್ರಣ, ಮಾನಸಿಕ ಆರೋಗ್ಯ, ಕುಟುಂಬ ಜೀವನ, ಸ್ನೇಹ ಸಂಬಂಧ ಹಾಗೂ ಶೈಕ್ಷಣಿಕ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ” ಎಂದು ಅವರು ಎಚ್ಚರಿಸಿದರು.

ಮಾದಕ ವಸ್ತುಗಳ ಬಳಕೆಯನ್ನು ತಡೆದು ಯುವಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದಲ್ಲಿ ಈಗಾಗಲೇ ಗೃಹ ಸಚಿವರ ನೇತೃತ್ವದಲ್ಲಿ ‘ಬೇಡ ಬ್ರೋ’ ಅಭಿಯಾನ ಆರಂಭಿಸಲಾಗಿದೆ. ಇದರೊಂದಿಗೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ದೇಶವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸುವ ಹಾಗೂ ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಿಸುವ ಆಶಯದೊಂದಿಗೆ ಈ ಜಾಗೃತಿ ಅಭಿಯಾನವನ್ನು ವ್ಯಾಪಕವಾಗಿ ಮುನ್ನಡೆಸಲಾಗುತ್ತಿದೆ. ಮಾದಕ ವಸ್ತುಗಳ ವಿರುದ್ಧ ದೇಶವ್ಯಾಪಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ರಾಜ್ಯಗಳ ಅಧಿಕಾರಿಗಳು ಹಾಗೂ ರೈಡರ್‌ಗಳು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಅಕ್ಟೋಬರ್ 31ರಂದು ಗುಜರಾತ್‌ನ ಕೆವಾಡಿಯಾದಲ್ಲಿ ಎಲ್ಲ ರಾಜ್ಯಗಳ ಪ್ರತಿನಿಧಿಗಳು ಒಗ್ಗೂಡಿ ಅಭಿಯಾನದ ಸಂದೇಶವನ್ನು ಮತ್ತಷ್ಟು ಬಲಪಡಿಸಲಿದ್ದಾರೆ ಎಂದು ದಿಲೀಪ್ ಎಂ.ಎನ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಬೈಕ್ ರೈಡರ್‌ಗಳು, ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *