Spread the love

ಶಿರಸಿ: ಶಿರಸಿ-ಹಾವೇರಿ ರಸ್ತೆಯ ಇಸಳೂರು ಸಮೀಪ ಭಾನುವಾರ ಸಂಜೆ ಕಾರೊಂದು ಬೈಕ್‌ಗೆ ಹಿಂಬದಿಯಿಂದ ಅತಿವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಹಿಂಬದಿ ಸವಾರ ಮಹಿಳೆ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ, ಆಂಧ್ರಪ್ರದೇಶ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ವಿರುದ್ಧ ಶಿರಸಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ವಿವರಗಳ ಪ್ರಕಾರ, ಶಿರಸಿ ತಾಲೂಕಿನ ಎಸಳೆ ಗ್ರಾಮದ ನಿವಾಸಿ ವಿನಾಯಕ ಭದ್ರ ಆರೇರ ಅವರ ಚಿಕ್ಕಮ್ಮನ ಮಗ ನಂದನ ನಾಯ್ಕ ಎಂಬಾತ ತನ್ನ ಮೋಟಾರ್ ಸೈಕಲ್‌ನಲ್ಲಿ (KA-31 EE-4988) ದೊಡ್ಡಮ್ಮ ಸೀತಾ ಅವರನ್ನು ಕೂರಿಸಿಕೊಂಡು ಶಿರಸಿ ಕಡೆಯಿಂದ ಹಾವೇರಿ ರಸ್ತೆ ಮಾರ್ಗವಾಗಿ ಬುಗಡಿಕೊಪ್ಪಕ್ಕೆ ತೆರಳುತ್ತಿದ್ದರು. ಸಂಜೆ ಸುಮಾರು 5:30ರ ವೇಳೆಗೆ ಇಸಳೂರು ಬಳಿ ತೆರಳುತ್ತಿದ್ದಾಗ, ಶಿರಸಿ ಕಡೆಯಿಂದಲೇ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರು (KA-03 PA-0668) ಬೈಕ್‌ಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ಇಬ್ಬರೂ ರಸ್ತೆಗೆ ಬಿದ್ದಿದ್ದು, ಸವಾರ ನಂದನ ನಾಯ್ಕ ಅವರ ಎಡಗಾಲಿಗೆ ತೀವ್ರವಾದ ಪೆಟ್ಟು ಬಿದ್ದು ಮೈಕೈಗೆ ಗಾಯಗಳಾಗಿವೆ. ಇನ್ನು ಹಿಂಬದಿ ಕುಳಿತಿದ್ದ ಸೀತಾ ಅವರ ತಲೆ ಹಾಗೂ ಎಡಗಾಲಿಗೆ ಭಾರಿ ಪ್ರಮಾಣದ ಗಾಯಗಳಾಗಿದ್ದು, ಇಬ್ಬರನ್ನೂ ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತವೆಸಗಿದ ಕಾರು ಚಾಲಕನನ್ನು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಜಯವಾಡ ತಾಲೂಕಿನ ಇಬ್ರಾಹಿಂಪಟ್ನಂ ನಿವಾಸಿ, ಸಾಫ್ಟ್‌ವೇರ್ ಎಂಜಿನಿಯರ್ ಪ್ಯಾರ್ದ ಸುಧೀರ ಬಾಬು (28) ಎಂದು ಗುರುತಿಸಲಾಗಿದೆ. ಈ ಕುರಿತು ವಿನಾಯಕ ನೀಡಿದ ದೂರಿನ ಮೇರೆಗೆ ಶಿರಸಿ ಸಂಚಾರ ಪೊಲೀಸರು ಆರೋಪಿ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 281 ಹಾಗೂ 125(ಬಿ) ಅಡಿಯಲ್ಲಿ (ಅಪರಾಧ ಕ್ರಮಾಂಕ: 58/2026) ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *