ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ ಖಂಡನೀಯ-ವಿಶ್ವಸಂತೋಷ ಭಾರತಿ

Spread the love

ಅಂಕೋಲಾ : ಇತ್ತಿಚಿಗೆ ಕಾರವಾರದ ಮುದಗಾದಲ್ಲಿ ಅಯ್ಯಪ್ಪ ವೃತದಾರಿಗಳ ಮೇಲೆ ವಿನಾಕಾರಣ ನೌಕಾನೆಲೆಯ ಕೆಲ ಸೈನಿಕರು ಹಲ್ಲೆ ನಡೆಸಿರುವುದು ಖಂಡನೀಯ ಎಂದು ಅಯ್ಯಪ್ಪ ಪೀಠಾಧಿಪತಿ, ವಿದ್ಯಾವಾಚಸ್ಪತಿ ಡಾ. ವಿಶ್ವಸಂತೋಷ ಭಾರತಿ ಶ್ರೀಪಾದಂಗಳು ಹೇಳಿದರು.

ಅವರು ಹಿರೇಗುತ್ತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸೈನಿಕರ ಕುರಿತಾಗಿ ಪ್ರತಿಯೊಬ್ಬರಿಗೂ ಗೌರವವಿದೆ. ಆದರೆ ದೇಶವನ್ನು ಕಾಯುವ ಸೈನಿಕರೇ, ಇಲ್ಲಿಯ ಸ್ಥಳೀಯರು ದೇಶಕ್ಕಾಗಿ ತಮ್ಮ ಭೂಮಿಯನ್ನು ತ್ಯಾಗ ಮಾಡಿ, ರಾಷ್ಟ್ರ ರಕ್ಷಣೆಗಾಗಿ ತಮ್ಮ ಭೂಮಿಯನ್ನು ನೀಡಿದ್ದು, ಅಂತಹವರ ಮೇಲೆ ಈ ರೀತಿ ಹಲ್ಲೆ ನಡೆಸಿರುವುದು ಇವರು ಸೈನಿಕರೋ ಅಥವಾ ರೌಡಿಗಳು ಎನ್ನುವುದು ಅರ್ಥವಾಗುತ್ತಿಲ್ಲ.

ಇವರಿಗೆ ದೇಶವನ್ನು ಕಾಯುವ ಜವಾಬ್ದಾರಿ ಇದೆ. ಆದರೆ ದೇಶವನ್ನು ಆಳುವ ಅಧಿಕಾರವನ್ನು ನೀಡಿಲ್ಲ. ಪ್ರಜೆಗಳೆ ದೇಶದ ಪ್ರಭುಗಳು. ನಾವು ಅವರಿಗೆ ನೀಡುತ್ತಿರುವ ಮರ್ಯಾದೆಯನ್ನು ಅವರು ಉಳಿಸಿಕೊಳ್ಳಬೇಕು. ರಾತ್ರಿಯ ವೇಳೆಯಲ್ಲಿ ಅಯ್ಯಪ್ಪ ವೃತದಾರಿಗಳ ಮೇಲೆ ಈ ರೀತಿ ಕೃತ್ಯ ನಡೆಸಿರುವುದು ಹೇಸಿಗೆ ತರುವಂತಹದು. ಇವರು ಮಾಡುವ ತಪ್ಪಿನಿಂದ ನಿಷ್ಠಾವಂತ ಸೈನಿಕರ ಮೇಲೂ ತಪ್ಪು ಭಾವನೆ ಬರುವಂತಾಗುತ್ತದೆ. ತಕ್ಷಣ ಸರಕಾರ, ಸಂಬಂಧಿಸಿದ ಸಚಿವರು ತಪ್ಪು ಮಾಡಿದ ಇಂತಹವರ ವಿರುದ್ಧ ಕ್ರಮಕೈಗೊಂಡು ಉಚ್ಚಾಟನೆ ಮಾಡಬೇಕು. 150 ಕೋಟಿ ಜನಸಂಖ್ಯೆ ಇದೆ. ನಮ್ಮಲ್ಲಿ ಅತ್ಯಂತ ವ್ಯವಸ್ಥಿತವಾದ ಕಾನೂನು ವ್ಯವಸ್ಥೆ ಇದೆ. ಈ ಕಾನೂನು ಪಾಠವನ್ನು ಸಂಬಂಧಿಸಿದ ಅಧಿಕಾರಿಗಳು ಇವರಿಗೆ ಮಾಡಬೇಕು.

ಕೇಂದ್ರ ಸರಕಾರ ಇಂತಹ ವಿಚಾರದಲ್ಲಿ ಗಂಭೀರವಾಗಿ ಪರಿಗಣಿಸಿ ಕಾನೂನಾತ್ಮಕವಾದ ಕ್ರಮಕೈಗೊಳ್ಳಬೇಕು. ಇಂತಹ ಸೈನಿಕರನ್ನು ತಕ್ಷಣ ಉಚ್ಚಾಟಣೆಗೊಳಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *