Spread the love

ಅಂಕೋಲಾ: ತಾಲೂಕಿನ ಬಾಳೆಗುಳಿ-ಯಲ್ಲಾಪುರ ಹೆದ್ದಾರಿಯ ಗುಳ್ಳಾಪುರ ಬಳಿ ಇಕೋ ಕಾರು ಹಾಗೂ ಡಂಪರ್ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟು, ಇತರ 3 ಮಂದಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಗುಳ್ಳಾಪುರ ನಿವಾಸಿ ಶಿವಾನಂದ ಅಂಬಿಗ ಮೃತಪಟ್ಟ ದುರ್ದೈವಿ. ಗೋಕಾಕ್‌ನಿಂದ ಎಂ-ಸ್ಯಾಂಡ್ ತುಂಬಿಕೊಂಡು ಅತಿವೇಗವಾಗಿ ಬರುತ್ತಿದ್ದ ಲಾರಿ, ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ದುರಂತ ಸಂಭವಿಸಿದೆ.

ಮೃತ ಶಿವಾನಂದ ಅಂಬಿಗ ಅವರು ತಮ್ಮ ಪತ್ನಿ, ಮಗ ಹಾಗೂ ಓರ್ವ ಸಂಬಂಧಿಯೊಂದಿಗೆ ಒಟ್ಟು 4 ಮಂದಿ ಮಾರುತಿ ಇಕೋ ಕಾರಿನಲ್ಲಿ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಅಂತ್ಯಸಂಸ್ಕಾರ ಮುಗಿಸಿ ಮರಳಿ ಊರಿಗೆ ಬರುವಾಗ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಎಂ-ಸ್ಯಾಂಡ್ ತುಂಬಿದ್ದ ಬೃಹತ್ ಡಂಪರ್ ಟ್ರಕ್ ಕೂಡ ಹೆದ್ದಾರಿಯಲ್ಲೇ ಪಲ್ಟಿಯಾಗಿದೆ. ಟ್ರಕ್ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಈ ಘಟನೆಗೆ ಪ್ರಮುಖ ಕಾರಣ ಎಂದು ಆರೋಪಿಸಲಾಗಿದ್ದು, ಅಪಘಾತ ಸಂಭವಿಸುತ್ತಿದ್ದಂತೆಯೇ ಲಾರಿ ಚಾಲಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ.

ಅಪಘಾತದ ಬಳಿಕ ನರಳಾಡುತ್ತಿದ್ದ ಗಾಯಾಳುಗಳನ್ನು ಕಂಡು ಅದೇ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳುತ್ತಿದ್ದ ಅಂಕೋಲಾದ ಗಣಪತಿ ಮೂಲೆಮನೆ ಅವರು ತಕ್ಷಣವೇ ತಮ್ಮ ವಾಹನ ನಿಲ್ಲಿಸಿ ನೆರವಿಗೆ ಧಾವಿಸಿದ್ದಾರೆ. ಅವರ ಸಕಾಲಿಕ ಸ್ಪಂದನೆಯಿಂದ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಅಂಕೋಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣವೇ ಅಂಕೋಲಾ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ. ಪರಾರಿಯಾಗಿರುವ ಲಾರಿ ಚಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *