Spread the love

ಕಾರವಾರ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ 1993ರ ಹಳೆಯ ಪ್ರಕರಣದಲ್ಲಿ ಆರೋಪಿಗೆ ಕಾರವಾರದ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 7,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಗುಂಪುಗೂಡಿ ‘ಪ್ರಶಾಂತ್’ ಎಂಬ ವ್ಯಕ್ತಿಗೆ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದರು. ಈ ಕುರಿತು 1993 ರಲ್ಲಿ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 143, 147, 149, 504, 302 ಅಡಿ ಪ್ರಕರಣ ದಾಖಲಾಗಿತ್ತು. ಅಂದಿನ ಕದ್ರಾ ವೃತ್ತದ ಸಿಪಿಐ ಆಗಿದ್ದ ಡಿ.ಕೆ. ನಿಕ್ಕಮ್ ಅವರು ಸಮಗ್ರ ತನಿಖೆ ನಡೆಸಿ, ಕಾರವಾರದ ಭಗತವಾಡಾ ಅಸ್ನೋಟಿ ನಿವಾಸಿ ದೀಲಿಪ ಶಾಂತಾ ತಳೇಕರ ಎಂಬಾತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ (Charge sheet) ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ (ಎಸ್.ಸಿ ನಂ: 16/2021) ನಡೆಯುತ್ತಿದ್ದಾಗ ಆರೋಪಿ ದೀಲಿಪ ತಲೆಮರೆಸಿಕೊಂಡಿದ್ದ. ಹೀಗಾಗಿ ಆತನ ಪ್ರಕರಣವನ್ನು ಎಲ್.ಪಿ.ಸಿ (LPC) ಎಂದು ಪರಿಗಣಿಸಲಾಗಿತ್ತು. ತರುವಾಯ, 16-04-2021 ರಂದು ಚಿತ್ತಾಕುಲ ಪಿಎಸ್‌ಐ ಪ್ರವೀಣ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿತ್ತು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಕಾರವಾರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ದಿನಾಂಕ 28-04-2026 ರಂದು ಆರೋಪಿ ದೀಲಿಪನಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ 7 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ (Public Prosecutor) ಕುಮಾರಿ ಸುನೀತಾ ನಾಗೇಕರ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.

ಅಧಿಕಾರಿಗಳಿಗೆ ಪ್ರಶಂಸೆ: ದಶಕಗಳಷ್ಟು ಹಳೆಯದಾದ ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ಒದಗಿಸಿ, ಕೋರ್ಟ್ ಮಾನಿಟರಿಂಗ್ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸುವ ಮೂಲಕ ಆರೋಪಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಚಿತ್ತಾಕುಲ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮೇಲಾಧಿಕಾರಿಗಳು ಶ್ಲಾಘಿಸಿದ್ದಾರೆ.

ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ., ಹಾಗೂ ಕಾರವಾರ ಡಿವೈಎಸ್‌ಪಿ ಎಸ್.ವಿ. ಗಿರೀಶ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಪ್ರವೀಣ ಕುಮಾರ, ಪರಶುರಾಮ ಮಿರ್ಜಿಗಿ, ಎಎಸ್‌ಐ ಸಂತೋಷ್ ಆರ್ ನಾಯ್ಕ ಹಾಗೂ ಸಿಬ್ಬಂದಿಗಳಾದ ಆಂಜನೇಯ ಹೆಚ್.ಕೆ, ಶ್ರೀಕಾಂತ ನಾಯ್ಕ ಮತ್ತು ಗಣೇಶನಾಯ್ಕ ಅವರು ಈ ಪ್ರಕರಣದಲ್ಲಿ ಯಶಸ್ವಿ ಕರ್ತವ್ಯ ನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *