KSRTC ಬಸ್ ತಡೆದು ಚಾಲಕನ ಮೇಲೆ ಶಿವಸೇನಾ ಕಾರ್ಯಕರ್ತರ ಪುಂಡಾಟ

Spread the love

ಮಹಾರಾಷ್ಟ್ರ: ಸೋಲಾಪುರ ಪಟ್ಟಣದಲ್ಲಿ ಸೋಮವಾರ, ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಬಸ್ ಅನ್ನು ತಡೆದು ಅದರ ವಿಂಡ್ ಸ್ಕ್ರೀನ್ ಮೇಲೆ ‘ಜೈ ಮಹಾರಾಷ್ಟ್ರ’ ಎಂದು ಬಣ್ಣ ಬಳಿದು, ಚಾಲಕನ ತಲೆ ಮತ್ತು ಮುಖದ ಮೇಲೆ ಕೇಸರಿ ಬಣ್ಣವನ್ನು ಎರಚಿ ಬಸ್ ಚಾಲಕನನ್ನು ‘ಜೈ ಮಹಾರಾಷ್ಟ್ರ’ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಕನ್ನಡ ಪರ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿವೆ.

ಹೌದು…ಮಹಾರಾಷ್ಟ್ರ ರಾಜ್ಯದ ಸೋಲಾಪುರ ನಗರದ ಸಾಥ್ ರಸ್ತೆಯಲ್ಲಿ ಸೋಮವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಇಳಕಲ್‌-ಸೋಲಾಪುರ ನಗರಗಳ ನಡುವೆ ಸಂಚರಿಸುವ ಬಸ್‌ (ಕೆಎ 29 ಎಫ್ 1350) ಅನ್ನು ತಡೆದ ಶಿವಸೇನೆ (ಉದ್ಧವ್‌ ಠಾಕರೆ) ಬಣದ 15 ರಿಂದ 20 ಕಿಡಿಗೇಡಿಗಳು ಪುಂಡಾಟ ಮೆರೆದಿದ್ದಾರೆ.

ಚಾಲಕನನ್ನು ಬಸ್ಸಿನಿಂದ ಕೆಳಗೆ ಇಳಿಸಿ, ಮುಖಕ್ಕೆ ಕೇಸರಿ ಬಣ್ಣ ಬಳಿದು ಜೈ ಮಹಾರಾಷ್ಟ್ರ ಎಂದು ಘೋಷಣೆ ಹೇಳಿಸಿದ್ದಾರೆ. ಅಲ್ಲದೇ, ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ, ಜೈ ಮಹಾರಾಷ್ಟ್ರ, ಜೈ ಭವಾನಿ ಎಂದು ಬಸ್ಸಿನ ಮೇಲೆ ಬರೆದು, ಘೋಷಣೆ ಕೂಗಿದ್ದಾರೆ.

ಈ ಸಂದರ್ಭದಲ್ಲಿ ಬಸ್ಸಿನಲ್ಲಿ ಸುಮಾರು 35 ಪ್ರಯಾಣಿಕರು ಇದ್ದರು. ಪುಂಡಾಟ ಬಳಿಕ ಬಸ್ಸನ್ನು ಬಿಟ್ಟು ಕಳುಹಿಸಿದ್ದಾರೆ. ಸ್ಥಳಕ್ಕೆ ಸದರ್ ಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾದರು ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *