ಶಿರಸಿ: ತಾಲೂಕಿನ ಉಂಚಳ್ಳಿಯ ಮಾಸ್ತಿಜಡ್ಡಿ ಹೊಳೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಮೃತ ದುರ್ದೈವಿಗಳನ್ನು ಹೊನ್ನಾವರದ ಹಿನ್ನೂರು ಮೂಲದ ಹರ್ಷಾ ಮಂಜುನಾಥ ನಾಯ್ಕ(19) ಹಾಗೂ ಸಹೋದರ ಮದನ ಗಜಾನನ ನಾಯ್ಕ(16) ಎಂದು ಗುರುತಿಸಲಾಗಿದೆ. ಮೃತರಿಬ್ಬರೂ ಸಹೋದರರಾಗಿದ್ದು, ವಿಹಾರಕ್ಕಾಗಿ ಹೊಳೆಗೆ ತೆರಳಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಜಲಸಮಾಧಿಯಾಗಿದ್ದಾರೆ. ಈ ಘಟನೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಯುವಕರು ನೀರಿನಲ್ಲಿ ಮುಳುಗಿರುವ ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ಸ್ ತಂಡದ ಸಹಕಾರದೊಂದಿಗೆ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಸತತ ಪ್ರಯತ್ನದ ಬಳಿಕ ಮೃ*ತದೇಹಗಳನ್ನು ನೀರಿನಿಂದ ಮೇಲಕ್ಕೆತ್ತುವಲ್ಲಿ ತಂಡ ಯಶಸ್ವಿಯಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್‌ನ ಪ್ರಮುಖರಾದ ಗೋಪಾಲ ಗೌಡ, ರಾಜು ಮಡಿವಾಳ, ಪ್ರದೀಪ ಎಸಳೆ, ದೀಪಕ ಕಾನಡೆ ಹಾಗೂ ದರ್ಶನ ಕಬ್ಬೆ ಅವರು ಸಕ್ರಿಯವಾಗಿ ಪಾಲ್ಗೊಂಡು ಶ್ರಮಿಸಿದ್ದಾರೆ.
ತಮ್ಮ ಪ್ರಾಣದ ಹಂಗು ತೊರೆದು, ತ್ವರಿತಗತಿಯಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಶ*ವಗಳನ್ನು ಹೊರತೆಗೆದ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ ಸಿಬ್ಬಂದಿ ಸಾಹಸವನ್ನು ಪೊಲೀಸ್ ಇಲಾಖೆ ಮುಕ್ತಕಂಠದಿಂದ ಶ್ಲಾಘಿಸಿದೆ. ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಲೈಫ್ ಗಾರ್ಡ್ ಸಿಬ್ಬಂದಿ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
