ಮಹಾರಾಷ್ಟ್ರದಿಂದ ನಿನ್ನೆ ಮನೆಗೆ ಬಂದಿದ್ದ ಯುವಕ ವಿದ್ಯುತ್ ತಂತಿ ತಗುಲಿ ದುರ್ಮರಣ!

Spread the love

ಕಾರವಾರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಮಹಾರಾಷ್ಟ್ರದಿಂದ ರಜೆಗೆ ಬಂದಿದ್ದ ಯುವಕನೊರ್ವ ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ 2.30 ರ ಸುಮಾರಿಗೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ದಂಡೆಭಾಗದಲ್ಲಿ ನಡೆದಿದೆ.

ಅವರ್ಸಾ ಗ್ರಾಪಂ ವ್ಯಾಪ್ತಿಯ ದಂಡೇಭಾಗದ ಮಹಾಂತೇಶ  ದೇವೆಂದ್ರ ಬಾನಾವಳಿಕರ್ (25 ವರ್ಷ) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಗಾಳಿಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ಜನರು ನಡೆದುಕೊಂಡು ಹೋಗುವ ಓಣಿಯೊಂದರಲ್ಲಿ ಬಿದ್ದಿತ್ತು ಎನ್ನಲಾಗಿದೆ.

ಈ ವೇಳೆ ಮಹಾಂತೇಶ ಎಂಬಾತ ಅಂಗಡಿಯಿಂದ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

ವಿದ್ಯುತ್ ತಂತಿ ತಗುಲಿ ಬಿದ್ದಿದ್ದ ಯುವಕನನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು,ಈ ಸಂದರ್ಭದಲ್ಲಿ ವೈದ್ಯರು ಪರೀಕ್ಷಿಸಿ ವಿದ್ಯುತ್ ಶಾಕ್‌ನಿಂದ ಆತ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದಾರೆ. ಹಾಗೆಯೇ ಜಾನುವಾರು ಸಹ ಮೃತಪಟ್ಟಿದ್ದು,ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು ಪರಿಶೀಲನೆ ನಡೆಸಿದರು.

ಮಹಾರಾಷ್ಟ್ರದಿಂದ ರಜೆಗೆಂದು ಬಂದಿದ್ದ ಮಹಾಂತೇಶ್ ಬಾನಾವಳಿಕರ್!
ಅವರ್ಸಾ ದಂಡೆಬಾಗ ನಿವಾಸಿಯಾದ ಮಹಾಂತೇಶ್ ಬಾನಾವಳಿಕರ್ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಕೆಲಸಮಾಡುತ್ತಿದ್ದರು ಎನ್ನಲಾಗಿದೆ. ಕೆಲಸಕ್ಕೆ ರಜೆಹಾಕಿ ಊರಿಗೆ ಮರಳಿದ್ದ ಮಹಾಂತೇಶ್ ಇಂದು ವಿದ್ಯುತ್ ಅವಘಡದಿಂದ ಅಸುನೀಗಿದ್ದಾನೆ. ಯುವಕನ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಗೆಳೆಯರ ಆಕ್ರಂದನ ಮುಗಿಲುಮುಟ್ಟಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *