ಅಂಕೋಲಾ: ಶೋಷಿತವರ್ಗದ ದ್ವನಿಯೇ ಪತ್ರಿಕೆಯಾಗಿದ್ದು,ಸಾಮಾಜಿಕ ತೊಡಕುಗಳ ವಿರುದ್ಧ ಸಮರಸಾರಿ ಎಷ್ಟೇ ಅಡೆ ತಡೆಗಳು ಎದುರಾದರು ಅದನ್ನು ಮುನ್ನೆಲೆಗೆ ತಂದು ಅದನ್ನು ನಿವಾರಿಸುವ ನಿಟ್ಟಿನಲ್ಲಿ ಹೋರಾಡುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಹೇಳಿದರು.

ಅವರು ಪಟ್ಟಣದ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ,ಅಂಕೋಲಾ ವತಿಯಿಂದ ಪತ್ರಿಕಾದಿನಾಚರಣೆ ಹಾಗೂ ಬಾರ್ಡೋಲಿ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯವನ್ನು ಹೇಗೆ ಪಡೆಯಬೇಕು ಎಂಬುದನ್ನು ಜನರೊಂದಿಗೆ ಚರ್ಚಿಸುವುದೇ ಪತ್ರಿಕೆಯ ಬಹುದೊಡ್ಡ ಕಾರ್ಯವಾಗಿತ್ತು, ಹಾಗೆಯೇ ಕರ್ನಾಟಕ ಏಕೀಕರಣ ಚಳುವಳಿಯಲ್ಲೂ ಅಂದಿನ ಪತ್ರಿಕೆಗಳ ಅಗಾಧ ಪರಿಶ್ರಮದಿಂದ ಇಂದು ಭವ್ಯ ಕರ್ನಾಟಕವನ್ನು ನಾವು ಕಾಣಬಹುದಾಗಿದೆ. ಶಿವರಾಂ ಕಾರಂತರು ಹೇಳಿದಂತೆ ದೇಶ ಸೇವೆ,ಈಶ ಸೇವೆ,ಬಾಷೆ ಸೇವೆಯೇ ಪತ್ರಿಕಾ ಧರ್ಮ ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ. ಅಧಿಕಾರಿಗಳೊಂದಿಗೆ ಪತ್ರಕರ್ತರು ಕೈಜೋಡಿಸಿದರೆ ಉತ್ತಮ ಸಾಮಾಜವನ್ನು ನಿರ್ಮಿಸಲು ಸಾಧ್ಯ.ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಕಾಲಹರಣ ಮಾಡುತ್ತಿರುವುದರಿಂದ ಮಾನಸಿಕ ಸ್ಥೈರ್ಯ ಕಳೆದುಕೊಳ್ಳಿತಿದ್ದಾರೆ ಅದ್ದರಿಂದ ಪತ್ರಿಕೆ ಓದುವ ಹವ್ಯಾಸ ಮಾಡಿಕೊಂಡರೆ ಜ್ಞಾನದ ಜೊತೆಗೆ ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.ಹಾಗೆಯೇ ಪತ್ರಿಕಾ ಮಹತ್ವ, ಸ್ವಾತಂತ್ರ್ಯ ಕುರಿತು ವಿವರಿಸಿದರು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ್ ಮಾತನಾಡಿ ಪತ್ರಕರ್ತರೆಂದರೆ ನಮ್ಮ ದೇಶದ ಬೆನ್ನೆಲುಬು, ಸಾಮಾಜಿಕ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಅದನ್ನು ಶೀಘ್ರದಲ್ಲೇ ಬಗೆಹರಿಸುವಲ್ಲಿ ಪತ್ರಿಕಾರಂಗದ ಕಾರ್ಯ ಮಹತ್ವದ್ದಾಗಿದೆ.ದೇಶ ಸದೃಢವಾಗಿ ಬೆಳೆಯಬೆಕೆಂದರೆ ಪತ್ರಕರ್ತರ ಶ್ರಮ ಅತ್ಯಗತ್ಯ ಎಂದರು. ಹಾಗೆಯೇ ಶಿಕ್ಷಣ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಒತ್ತು ನೀಡಿ ಏನೇ ನಾನುಕೂಲತೆಗಳಿದ್ದರು ಅದನ್ನು ಬಗೆಹರಿಸಲು ನಾನು ಶತಸಿದ್ದ ಎಂದರು.

ಗೋಖಲೆ ಸೆಂಟನರಿ ಕಾಲೇಜಿನ ಪ್ರಾಂಶುಪಾಲ ಎಸ್ ವಿ ವಸ್ತ್ರದ ಮಾತನಾಡಿ ಇಂದಿನ ದಿನಗಳಲ್ಲಿ ಪತ್ರಿಕೆಗಳು ಸವಾಲಿನ ಪರಿಸ್ಥಿತಿ ಎದುರಿಸುತ್ತಿದೆ,ಹಾಗೆಯೇ ಸಂದಿಗ್ಧ ಸ್ಥಿತಿಯನ್ನು ಎದುರಿಸುತ್ತಿದೆ. ಆದ್ದರಿಂದ ಸರಕಾರ ಈ ಕುರಿತು ಗಮನಹರಿಸಬೇಕಾಗಿದೆ.ಸಮಾಜಮುಖಿ ಕಾರ್ಯಗಳಲ್ಲಿ ಪತ್ರಕರ್ತರನ್ನು ಗುರುತಿಸಿ ಅವರಿಗೆ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ಕೆನರಾ ವೇಲ್ಪರ್ ಟ್ರಸ್ಟಿನ ಆಡಳಿತಾಧಿಕಾರಿ ಆರ್ ವಿ ಕೇಣಿ ಮಾತನಾಡಿ ಸಾಮಾಜಿಕ ಕಾರ್ಯಗಳ ಮೂಲಕ ನೈಜಯತೆಯನ್ನು ಪ್ರದರ್ಶಿಸುವ ಮೂಲಕ ಅಂಕೋಲಾ ಪತ್ರಕರ್ತರ ಕಾರ್ಯ ಶ್ಲಾಘನೀಯ.ಮುಂದಿನ ದಿನಗಳಲ್ಲಿ ದಿನಕರ ವೇದಿಕೆಯ ಮೂಲಕ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಿದ್ದೇವೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯದೆ ಪತ್ರಿಕೆಯನ್ನು ಓದಿ ಬೆಂಬಲಿಸುವ ಕಾರ್ಯ ವಿದ್ಯಾರ್ಥಿಗಳಿಂದಾಗಬೇಕು ಎಂದರು.
ಭಟ್ಕಳ ತಾಲೂಕಿನ ಹಿರಿಯ ವರದಿಗಾರರಾದ ಎಂ ಆರ್ ಮಾನ್ವಿ ಅವರಿಗೆ ಬಾರ್ಡೋಲಿ ಗೌರವ ಪುರಸ್ಕಾರ ನೀಡಲಾಯಿತು.ಹಾಗೆಯೇ ವೈದ್ಯಕೀಯ ವಿಭಾಗದ ನಿಟ್ ಪರೀಕ್ಷೆಯಲ್ಲಿ ಸಾಧನೆಗೈದ ಮಾನ್ಯ ಮಂಜುನಾಥ್ ನಾಯ್ಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವರದಿಗಾರ ಎಂ ಆರ್ ಮಾನ್ವಿ ಇಂದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ, ಈ ಪ್ರಶಸ್ತಿಯ ಮೂಲಕ ಅಂಕೋಲಾ ಕಾರ್ಯನಿರತ ಪತ್ರಕರ್ತರ ಸಂಘ ನನ್ನ ಜವಾಬ್ದಾರಿ ಹೆಚ್ಚಿಸಿದ್ದಾರೆ, ಪತ್ರಕರ್ತರ ಹಾದಿ ಸುಲಭದ ದಾರಿಯಲ್ಲ,ಸಾಕಷ್ಟು ನೋವಗಳು,ಕಷ್ಟಗಳು ಹಾಗೂ ಬಹಳಷ್ಟು ಅಡ್ಡಿ,ಆತಂಕಗಳು ಎದುರಿಸಿ ಸತ್ಯದ ಪರವಾಗಿ ನಿಲ್ಲಬೇಕಾದ ಅನಿವಾರ್ಯತೆ ಪತ್ರಕರ್ತರದ್ದಾಗಿದೆ.ಎಲ್ಲೋ ಹುಟ್ಟಿ ಬೆಳೆದ ನನ್ನನ್ನು ನನ್ನ ಅರ್ಹತೆಯ ಆಧಾರದ ಮೇಲೆ ನನ್ನನ್ನು ಗುರುತಿಸಿ ಗೌರವಿಸಿರುವುದು ನಮ್ಮ ರಾಷ್ಟ್ರದ ಸಂವಿಧಾನದ ಹೆಗ್ಗಳಿಕೆಯಾಗಿದೆ. ಅನ್ಯಾಯವನ್ನು ಹೊರಗೆಳೆದು,ನ್ಯಾಯಕ್ಕೋಸ್ಕರ ಹೋರಾಡುವ ಮನಗುಣವನ್ನು ಹೊಂದಿದವರೆ ನಿಜವಾದ ಪತ್ರಕರ್ತರು,ಇಂದು ಪತ್ರಿಕೋದ್ಯಮ ಹೋಗುತ್ತಿರುವ ವೇಗದಲ್ಲಿ ಸತ್ಯ ಮರೆಮಾಚುತ್ತಿದೆ ಎಂದರು.
ಪತ್ರಕರ್ತ ವಾಸುದೇವ ಗುನಗಾ ಸ್ವಾಗತಿಸಿದರು.ಮೋಹನ್ ದುರ್ಗೆಕರ್ ಸನ್ಮಾನ ಪತ್ರ ವಾಚಿಸಿದರು,ಸುಭಾಷ್ ಕಾರೇಬೈಲ್ ನಿರೂಪಿಸಿದರು,ನಾಗರಾಜ್ ಜಾಂಬಳೆಕರ್ ವಂದಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ರಾಘು ಕಾಕರಮಠ, ನಾಗರಾಜ್ ಮಂಜುಗುಣಿ,ಕೆ ರಮೇಶ್,ಅಕ್ಷಯ ನಾಯ್ಕ,ಅನೂಪ್ ಗುನಗಾ ಮುಂತಾದವರು ಉಪಸ್ಥಿತರಿದ್ದರು.


