ರಾಮಕ್ಷತ್ರೀಯ ಸಮಾಜದ ಹಗ್ಗಜಗ್ಗಾಟ ಪಂದ್ಯಾಟ;ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಮಾವಿನಹೊಳೆ ಶರಾವತಿ ಬಲದಂಡೆ

Spread the love

ಹೊನ್ನಾವರ :ತಾಲೂಕಿನ ನಂಜೂರು ಕೋಡಾಳದ ಮಾವಿನಹೊಳೆ ರಾಮಕ್ಷತ್ರೀಯ(Ramakshatriya) ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉತ್ತರ ಕನ್ನಡ ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಮಹಿಳೆಯರ ಮತ್ತು ಪುರುಷರ ಹಗ್ಗಜಗ್ಗಾಟ ಪಂದ್ಯಾವಳಿ ಸಮಸ್ತ ರಾಮಕ್ಷತ್ರೀಯ ಸಮಾಜದ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಹೌದು….ಶರಾವತಿ ಬಲದಂಡೆಯ ಮೇಲಿರುವ ಮಾವಿನಹೊಳೆಯಲ್ಲಿ ಹಗ್ಗಜಗ್ಗಾಟ ಕಾರ್ಯಕ್ರಮಕ್ಕೆ ಅದ್ಧೂರಿಯಾದ ಅಂಕಣವನ್ನು ಸಿದ್ಧಪಡಿಸಲಾಗಿತ್ತು. ಸಾವಿರಾರು ಆಸನಗಳ ವ್ಯವಸ್ಥೆ,ಊಟೋಪಚಾರ ಹಾಗೂ ಸಭಾ ಕಾರ್ಯಕ್ರಮಕ್ಕಾಗಿ ಅದ್ದೂರಿ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ರಾಮಕ್ಷತ್ರೀಯ ಸಮಾಜದ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಸಮಾರಂಭಕ್ಕೆ ಈ ಹಗ್ಗಜಗ್ಗಾಟ ಪಂದ್ಯಾವಳಿ ಸಾಕ್ಷಿಯಾಯಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ನಂಜೂರು ಕೋಡಾಳದ ಮಾವಿನಹೊಳೆ ರಾಮಕ್ಷತ್ರೀಯ ಸಂಘ ರಾಮಕ್ಷತ್ರೀಯ ಸಮಾಜಕ್ಕಾಗಿ ಸಿದ್ಧಪಡಿಸಿದ ನೂತನ ಧ್ವಜವನ್ನು ಸ್ವರ್ಣವಲ್ಲಿ ರಾಮಕ್ಷತ್ರೀಯ ಪರಿಷತ್‌ ಅಧ್ಯಕ್ಷ ಎಸ್‌.ಕೆ. ನಾಯ್ಕ ದ್ವಜಾರೋಹಣ ನೆರವೇರಿಸಿದರು.  ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಧಾನ ಸರಕಾರಿ ಅಭಿಯೋಜಕಿ ತನುಜಾ ಬಾಬುರಾವ ಹೊಸಪಟ್ಟಣಕರ  ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ನಂತರದಲ್ಲಿ ಪ್ರಶಾಂತ್‌ ನಾಯ್ಕ ಮಿರ್ಜಾನ್‌ ರಾಮಕ್ಷತ್ರೀಯ ಕ್ಷಾತ್ರಧರ್ಮವನ್ನು ಪ್ರತಿನಿಧಿಸುವ ಲಾಂಚನವನ್ನು ಬಿಡುಗಡೆಗೊಳಿಸಿದರು. ಹೀರೆಗುತ್ತಿಯ ಆರ್‌.ಎಪ್‌.ಒ ರಾಜು ಅಣ್ಣಪ್ಪ  ನಾಯ್ಕ ರಾಮಕ್ಷತ್ರೀಯರ ಸ್ವಾಭಿಮಾನದ ಸಂಕೇತವನ್ನು ಪ್ರತಿನಿಧಿಸುವ ದ್ಯೆಯಗೀತೆಯನ್ನು ಲೋಕಾರ್ಪಣೆಗೊಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಗ್ಗಜಗ್ಗಾಟ ಕಾರ್ಯಕ್ರಮದ ಸಂಘಟಕ ಕವನ್‌ ಕುಮಾರ್‌ ಇದು ನಮ್ಮ ಸಂಘದ ನಾಲ್ಕನೇ ಕಾರ್ಯಕ್ರಮ. ಈ ಹಿಂದೆ ಮೂರು ಕಾರ್ಯಕ್ರಮಗಳನ್ನು ಮಾಡಿ ಸೈ ಎನಿಸಿಕೊಂಡಿದ್ದೇವೆ. ಇದು 26 ಮನೆಯವರು ಸೇರಿ ಮಾಡಿದ ಕಾರ್ಯಕ್ರಮ. ಇಂತ ಕಾರ್ಯಕ್ರಮವನ್ನು ಮಾಡಲು ರಾಮಕ್ಷತ್ರೀಯ ಸಮಾಜದಿಂದ ಮಾತ್ರ ಸಾಧ್ಯ. ಹಿಂದು ಕ್ಷತ್ರಿಯ ಎಂದು ಶಾಲಾ ದಾಖಲೆಗಳಲ್ಲಿ ಬರೆಸಿದ ನಮ್ಮ ಉತ್ತರ ಕನ್ನಡ ಜಿಲ್ಲೆಯ ರಾಮಕ್ಷತ್ರಿಯ ಸಮುದಾಯದವರನ್ನು ಕೇಂದ್ರದ ಓಬಿಸಿ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದ ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಕಾರಿ ಸೌಲಭ್ಯ ಸಿಗುತ್ತಿಲ್ಲ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಈ ವೇದಿಕೆಯನ್ನು ಸಿದ್ಧಪಡಿಸಿರುವುದಾಗಿ ತಿಳಿಸಿದರು.

ಇದೇ ವೇಳೆ ವೇದಿಕೆಯಲ್ಲಿ ರಾಮಕ್ಷತ್ರಿಯ ಸಮಾಜದ ಎಲ್ಲ ಊರಿನ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಮಾಜವನ್ನು ಉದ್ದೇಶಿಸಿ  ಮಾತನಾಡಿದ ಮೋಹನ್ ಸಾಲೆಹಿತ್ತಲ  ಇವತ್ತು ಸನ್ಮಾನಿತರಾದವರು ಊರಿನ ವ್ಯಾಪ್ತಿಗೆ ಕೆಲಸ ಮಾಡದೇ, ನಮ್ಮ ಸಮಾಜದ ಒಗಟ್ಟಿಗಾಗಿ ಶ್ರಮಿಸಿ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಬೇಕು ಎಂದು ಕಿವಿ ಮಾತು ಹೇಳಿದರು. ಪ್ರಧಾನ ಸರಕಾರಿ ಅಭಿಯೋಜಕರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರದ ಶ್ರೀಮತಿ ತನುಜಾ ಬಾಬುರಾವ ಹೊಸಪಟ್ಟಣಕರ ಅವರು ಮಾತನಾಡಿ, ರಾಮಕ್ಷತ್ರೀಯ ಸಮಾಜದವರು ಶೈಕ್ಷಣಿಕವಾಗಿ ಯಶಸ್ಸನ್ನು ಸಾಧಿಸಬೇಕು. ಶೈಕ್ಷಣಿಕವಾಗಿ ಯಶಸ್ಸು ಸಾಧಿಸಿದ್ರೆ, ಮಾತ್ರ ಯಾವುದೇ ಸಮಾಜ ಪ್ರಗತಿಪಥದಲ್ಲಿ ನಡೆಯೋದಕ್ಕೆ ಸಾಧ್ಯ ಹಾಗೇ ನಮ್ಮ ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಮಕ್ಷತ್ರೀಯ ಸಂಘದಿಂದ ನೆರವು ನೀಡಬೇಕು ಎಂದು ಕರೆಕೊಟ್ಟರು.

ಬಳಿಕ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮಾತನಾಡಿ ಪ್ರತಿಯೊಂದು ಸಮಾಜವೂ ಸಂಘಟಿತವಾಗಿ ಹೋರಾಡುತ್ತಿದೆ. ಆದ್ರೆ ಈ ವಿಚಾರದಲ್ಲಿ ರಾಮಕ್ಷತ್ರೀಯ ಸಮಾಜ ತುಂಬಾ ಹಿಂದುಳಿದಿತ್ತು. ಆದ್ರೀಗ ಸಂಘಟಿತರಾಗುವ ಕಾಲ ಬಂದಿದೆ. ನನ್ನ ರಾಜಕೀಯ ಜೀವನದಲ್ಲಿ ರಾಮಕ್ಷತ್ರೀಯ ಸಮಾಜದ ಸೇವೆ ಅಗಣಿತವಾದದ್ದು. ನಿಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ ಶಾಸಕ ದಿನಕರ ಶೆಟ್ಟಿಯವರನ್ನು ರಾಮಕ್ಷತ್ರಿಯ ಸಂಘದ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸ್ವರ್ಣವಲ್ಲಿ ರಾಮಕ್ಷತ್ರೀಯ ಪರಿಷತ್‌ನ ಅಧ್ಯಕ್ಷ ಎಸ್‌.ಕೆ. ನಾಯ್ಕ ಅವರು ಮಾತನಾಡಿ, ಈ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿರುವ ನಂಜೂರು ಕೋಡಾಳದ ಮಾವಿನಹೊಳೆ ರಾಮಕ್ಷತ್ರೀಯ ಸಂಘದ ಸಂಘಟಕರ ಕಾರ್ಯವನ್ನು ಪ್ರಶಂಸಿಸಿದರು. ಸಂಘಟಕರಾದ ವಿನೋದ್‌ ನಾಯ್ಕ, ಸಂಘಟಕರ ಪರವಾಗಿ ಮಾತನಾಡಿ, ನಮ್ಮ ರಾಮಕ್ಷತ್ರೀಯ ಸಮಾಜ ಮುಂದಿನ ದಿನಗಳಲ್ಲಿ ಮಾದರಿ ಸಮಾಜವಾಗಿ ನಿರ್ಮಾಣವಾಗಬೇಕು ಎಂದು ಹೇಳಿದರು. ನಿವೃತ್ತ ಶಿಕ್ಷಕರಾದ ಚಂದಾವರ ಆನಂದ್‌ ವೈ ನಾಯ್ಕ ಅವರು ಮಾತನಾಡಿ, ಮಾವಿನಹೊಳೆಯ ಜನರು ಸಂಸ್ಕಾರವಂತರು. ಕೃಷಿ ವ್ಯವಸಾಯ ಮಾಡುವ ಮಾವಿನಹೊಳೆಯ ರಾಮಕ್ಷತ್ರೀಯರು ಮಾದರಿಯಾಗಿದ್ದಾರೆ. ಈ ಸಂಸ್ಕಾರವನ್ನು ನಾವು ನಮ್ಮ ಮಕ್ಕಳಿಗೆ ಕಲಿಸಿಕೊಡಬೇಕಾಗಿದೆ ಎಂದು ಹೇಳಿದರು.

ಶಾಸಕ ದಿನಕರ ಶೆಟ್ಟಿಯವರು ಹಗ್ಗಜಗ್ಗಾಟ ಪಂದ್ಯಾವಳಿ ಟ್ರೋಪಿಯನ್ನು ಅನಾವರಣಗೊಳಿಸಿ, ಹಗ್ಗಜಗ್ಗಾಟ ಕ್ರೀಡಾಂಗಣವನ್ನು ಕೂಡ ಉದ್ಘಾಟಿಸಿ, ಪಾಲ್ಗೊಂಡಿರುವ ತಂಡಗಳಿಗೆ ಶುಭಕೋರಿದರು.ಇದೇ ವೇಳೆ ರಾಮಕ್ಷತ್ರೀಯ ಸಮಾಜವನ್ನು ಒಟ್ಟುಗೂಡಿಸಲು ಹಗ್ಗಜಗ್ಗಾಟ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಂಘಟನಾತ್ಮಕ ಕೆಲಸ ಮಾಡಿದ ಕವನ್‌ ಕುಮಾರ್‌ ಅವರನ್ನು ರಾಮಕ್ಷತ್ರಿಯ ಸಂಘದ ವತಿಯಿಂದ ಶಾಸಕರಾದ ದಿನಕರ ಶೆಟ್ಟಿಯವರು ಸನ್ಮಾನಿಸಿ ಗೌರವಿಸಿದರು.


ಹಗ್ಗಜಗ್ಗಾಟ ಪ್ರಾರಂಭಕ್ಕೂ ಮುನ್ನ ಕ್ರೀಡಾಂಗಣದಲ್ಲಿ ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ನಡೆಯಿತು. ಸುಡುಮದ್ದಿನಿಂದ ಆಗಸದಲ್ಲಿ ಮೂಡಿದ ಬಣ್ಣ ಬಣ್ಣದ ಚಿತ್ತಾರಗಳು ಎಲ್ಲರ ಗಮನ ಸೆಳೆಯಿತು. ಅದ್ರಲ್ಲೂ ಡ್ರೋನ್ ಮೂಲಕ ಸೆರೆ ಹಿಡಿದಿರುವ ಈ ಅಪೂರ್ವ ದೃಶ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ರಣರೋಚಕವಾಗಿ ನಡೆದ ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ಪುರುಷರು ಮತ್ತು ಮಹಿಳೆಯರ 30ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡು ಸೆಣಸಾಟ ನಡೆಸಿದವು. ಮಹಿಳೆಯರ ಫೈನಲ್‌ನಲ್ಲಿ ಮಾವಿನಹೊಳೆ ಮತ್ತು ಮಂಕಿ ತಂಡಗಳು ಮುಖಾಮುಖಿಯಾಗಿದ್ದವು.

ಅಂತಿಮ ಸುತ್ತಿನಲ್ಲಿ ಮಾಹಿವನಹೊಳೆ ತಂಡ ವಿರೋಚಿತ ಸೋಲು ಕಾಣುವ ಮೂಲಕ ರನ್ನರ್‌ ಅಪ್‌ ಆಗಿ ಹೊರ ಹೊಮ್ಮಿದರೆ, ಮಂಕಿಪುರದ ಶ್ರೀ ಮಂಜುನಾಥ  ತಂಡ  ಮಹಿಳೆಯರ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತು.

ಪುರುಷರ ಫೈನಲ್ಸ್‌ನಲ್ಲಿ ಮಾವಿನಹೊಳೆ ತಂಡ ಮಿರ್ಜಾನ್‌ ತಂಡವನ್ನು ರಣರೋಚಕವಾಗಿ ಮಣಿಸಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿ ಆರ್ಭಟಿಸಿತು. ಇನ್ನು ಟೂರ್ನಿಗೆ ಬಂದಂತ ಆಟಗಾರರು ಮತ್ತು ಪ್ರೇಕ್ಷಕರಿಗಾಗಿ ಭರಪೂರ ಊಟದ ವ್ಯವಸ್ಥೆಯನ್ನು ಮಾಡಿದ ಸಂಘಟಕರ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಒಟ್ನಲ್ಲಿ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಐದೂವರೆ ಸಾವಿರಕ್ಕೂ ಅಧಿಕ ರಾಮಕ್ಷತ್ರೀಯ ಸಮಾಜ ಬಾಂಧವರನ್ನು ಒಟ್ಟೂಗೂಡಿಸುವ ಮತ್ತು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸುವ ಒಕ್ಕೋರಲ ಆಗ್ರಹಕ್ಕೆ, ಈ ಹಗ್ಗಜಗ್ಗಾಟ ಕಾರ್ಯಕ್ರಮ ಸಾಕ್ಷಿಯಾಯಿತು.

Leave a Reply

Your email address will not be published. Required fields are marked *