ಅಂಕೋಲಾ: ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಮಠಾಕೇರಿಯಲ್ಲಿ ಡೆತ್ ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ಬೆಳ್ಳಂಬೆಳಗ್ಗೆ ನಡೆದಿದೆ.

ಹೌದು…ಕಾರವಾರದ ಪಿಕಳೆ ಆಸ್ಪತ್ರೆಯಲ್ಲಿ ಔಷಧಿವಿತರಕರಾಗಿದ್ದ ರಾಜೀವ್ ಪಿಕಳೆ (67)ಎಂಬುವವರೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು,ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಮಠಾಕೇರಿಯ ಬಳಿ ಇರುವ ತಮ್ಮ ನಿವಾಸದ ಮುಂಭಾಗದ ತುಳಸಿಕಟ್ಟೆಯ ಬಳಿಕೂತು ತಮ್ಮ ಬಳಿ ಇದ್ದ ಡಬಲ್ ಬ್ಯಾರಲ್ ಗನ್ನಿನಿಂದ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಮನೆಕೆಲಸದಾಕೆ ಬೆಳಿಗ್ಗೆ ಮನೆಕೆಲಸಕ್ಕೆಂದು ಬಂದವೇಳೆ ಮನೆಯಂಗಳದಲ್ಲಿ ರಾಜೀವ್ ಪಿಕಳೆಯವರ ರಕ್ತಸಿಕ್ತ ಮೃತದೇಹ ಕಂಡುಬಂದಿದೆ ಎನ್ನಲಾಗಿದೆ. ಈ ಕುರಿತು ಪೊಲೀಸರಿಗೆ ವಿಷಯ ತಿಳಿಸಿದ್ದು,ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ಗಿರೀಶ್ ಹಾಗೂ ಅಂಕೋಲಾ ಸಿಪಿಐ ಚಂದ್ರಶೇಖರ್ ಮಠಪತಿ,ಪಿಎಸೈ ಗುರುನಾಥ್ ಹಾದಿಮನಿ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಸ್ಥಳಕ್ಕೆ ಶ್ವಾನದಳ,ಬೆರಳಚ್ಚು ತಂತ್ರಜ್ಞರು ಆಗಮಿಸಿ ಮಾಹಿತಿಯನ್ನು ಕಲೆಹಾಕಿದ್ದಾರೆ.

ಅವಧಿ ಮೀರಿದ ಮಾತ್ರೆಯ ಆರೋಪ!
ವೈದ್ಯರ ಕಳೆದ ಹಲವು ದಿನಗಳ ಹಿಂದೆ ಅವಧಿ ಮೀರಿದ ಮಾತ್ರೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯ ರಾಜೀವ ಪಿಕಳೆ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿಯೊಬ್ಬರು ಚಿಕಿತ್ಸೆ ವೇಳೆ ಅವಧಿಮೀರಿದ ಮಾತ್ರೆಯನ್ನು ನೀಡುತ್ತಿಡುವ ಸಂದರ್ಭದಲ್ಲಿ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.ಈ ವಿಡಿಯೋ ವೈರಲ್ ಆದ ಬಳಿಕ ಬೆನ್ನಲ್ಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು ಎನ್ನಲಾಗಿದೆ.ಹಲವು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ರಾಜೀವ್ ಪಿಕಳೆ ಈ ಘಟನೆಯಿಂದ ನೊಂದು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಆತನ ಅಣ್ಣ ನೀತಿನ್ ಪಿಕಳೆ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು.

ಆತ್ಮಹತ್ಯೆಯ ಅನುಮಾನಕ್ಕೆ ಉತ್ತರಿಸಿದ ಡೆತ್ ನೋಟ್.
ಶುಕ್ರವಾರ ಬೆಳ್ಳಂಬೆಳಗ್ಗೆ ರಾಜೀವ್ ಪಿಕಳೆಯವರ ಆತ್ಮಹತ್ಯೆಯ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಹಲವಾರು ವಿಷಯಗಳು ಮುನ್ನೆಲೆಗೆ ಬಂದಿತ್ತು,ಅದರಂತೆಯೇ ಕಳೆದ ಹಲವಾರು ದಿನಗಳ ಹಿಂದೆಯಷ್ಟೇ ಅವಧಿಮೀರಿದ ಔಷಧ ವಿತರಣೆ ಮಾಡಿದ ಕುರಿತು ಆರೋಪ ಎದುರಿಸುತ್ತಿದ್ದ ಇವರು ಈ ಕಾರಣಕ್ಕೆ ಯಾರಿಂದಾದರು ಒತ್ತಡವಿತ್ತೆ ಎನ್ನುವ ಪ್ರಶ್ನೆ ಎದುರಾಗಿದ್ದು,ಆತನ ಪಿಕಳೆ ಆಸ್ಪತ್ರೆಯ ವೈದ್ಯರಾದ ಹಾಗೂ ರಾಜೀವ್ ಅವರ ಅಣ್ಣ ನಿತಿನ್ ಪಿಕಳೆಯವರು ಈ ಕುರಿತು ಸಂಶಯ ವ್ಯಕ್ತಪಡಿಸಿದ್ದರು,ಹೀಗಾಗಿ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದರು,ಈ ಹಿನ್ನೆಲೆಯಲ್ಲಿ ಮನೆಯನ್ನು ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಕೊಠಡಿಯ ಒಳಗೆ ಡೆತ್ ನೋಟ್ ದೊರೆತಿದ್ದು, “ನನ್ನ ಸಾವಿಗೆ ನಾನೇ ಕಾರಣ ಹೊರತು ಮತ್ತೇನು ಇಲ್ಲ” ಎಂದು ಸಹಿ ಹಾಕಿ ಬರೆದಿಟ್ಟಿರುವುದು ಕಂಡುಬಂದಿದೆ.ಈ ಬಗ್ಗೆ ಆತ್ಮಹತ್ಯೆ ಕೇಸ್ ನಲ್ಲಿ ತಿರುವು ದೊರೆತಿದ್ದು ಆತ್ಮಹತ್ಯೆಗೆ ಮತ್ತೇನು ಕಾರಣವಿರಬಹುದು ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

ಸ್ಥಳಕ್ಕೆ ಎಸ್ಪಿ ದೀಪನ್ ಭೇಟಿ.
ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು ಪ್ರಾಥಮಿಕ ತನಿಖೆಯಲ್ಲಿ ಅವರ ಬಳಿ ಇದ್ದ ಪರವಾನಗಿ ಗನ್ ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹಾಗೆಯೇ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅವಧಿ ಮೀರಿದ ಔಷಧಿ ನೀಡಿದ್ದ ಕುರಿತು ನಡೆದಿದ್ದ ಘರ್ಷಣೆಯ ಕುರಿತು ವಿಚಾರಣೆ ನಡೆಸಿದ್ದೇವೆ ಎಂದರು.


