Spread the love

ಯಲ್ಲಾಪುರ: ವ್ಯಕ್ತಿಯೊಬ್ಬನನ್ನು ಕೊ*ಲೆ ಮಾಡಿ, ಪ್ರಕರಣದ ದಿಕ್ಕು ತಪ್ಪಿಸಲು ಆತನ ಶ*ವವನ್ನು ಕಾರಿನಲ್ಲಿಟ್ಟು ಬೆಂಕಿ ಹಚ್ಚಿ, ಅದೊಂದು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ ಭೀಕರ ಪ್ರಕರಣವನ್ನು ಭೇದಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕೃತ್ಯವೆಸಗಿದ್ದ ಹಳೆ ಹುಬ್ಬಳ್ಳಿ ಮೂಲದ ಮೂವರು ಹಂತಕರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಅಪಘಾತವಲ್ಲ, ಅದೊಂದು ಭೀಕರ ಕೊಲೆ!

ಏಪ್ರಿಲ್ 8, 2026 ರಂದು ಮುಂಜಾನೆ 5:00 ರಿಂದ 7:00 ಗಂಟೆಯ ಸುಮಾರಿಗೆ ಯಲ್ಲಾಪುರದ ತಾಳೆ ಕುಂಬ್ರಿ ಬಸ್ ನಿಲ್ದಾಣದ ಎದುರು ಈ ಘಟನೆ ನಡೆದಿತ್ತು. KA-04/MJ-8986 ನೋಂದಣಿಯ ಕಾರೊಂದು ಯಲ್ಲಾಪುರ ಕಡೆಯಿಂದ ಕಾರವಾರದ ಕಡೆಗೆ ಅತಿವೇಗವಾಗಿ ಬಂದು, ರಸ್ತೆಯ ತಗ್ಗಿಗೆ ಉರುಳಿ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಕಾರು ಹಾಗೂ ಕಾರಿನಲ್ಲಿದ್ದ ವ್ಯಕ್ತಿ ಸಂಪೂರ್ಣ ಸುಟ್ಟು ಕರಕಲಾಗಿದ್ದರು. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 281, 106(1) ರಡಿ ಅಪಘಾತ ಪ್ರಕರಣ ದಾಖಲಾಗಿತ್ತು.

ಆದರೆ, ಇದೊಂದು ಸಹಜ ರಸ್ತೆ ಅಪಘಾತವಲ್ಲ, ಯಾರೋ ದುಷ್ಕರ್ಮಿಗಳು ಕೊ*ಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಈ ರೀತಿ ಸುಳ್ಳು ಅಪಘಾತ ಸೃಷ್ಟಿಸಿರಬಹುದು ಎಂದು ದೂರುದಾರರು ಸಂಶಯ ವ್ಯಕ್ತಪಡಿಸಿದ್ದರು. ಈ ಹೇಳಿಕೆಯ ಆಧಾರದ ಮೇಲೆ ಎಚ್ಚೆತ್ತ ಪೊಲೀಸರು, ಪ್ರಕರಣಕ್ಕೆ ಸೆಕ್ಷನ್ 103 (ಕೊಲೆ) ಹಾಗೂ 238 (ಸಾಕ್ಷ್ಯ ನಾಶ) ಗಳನ್ನು ಅಳವಡಿಸಿಕೊಂಡು ತನಿಖೆ ಚುರುಕುಗೊಳಿಸಿದರು.

ಮೃ*ತನ ಗುರುತು ಪತ್ತೆ ಹಾಗೂ ಹಂತಕರ ಸೆರೆ

ಈ ಕ್ಲಿಷ್ಟಕರ ಪ್ರಕರಣದ ಬೆನ್ನತ್ತಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ. ಅವರು, ಯಲ್ಲಾಪುರ ಪೊಲೀಸ್ ನಿರೀಕ್ಷಕ ರಮೇಶ್ ಹನಾಪೂರ್ ನೇತೃತ್ವದಲ್ಲಿ 2 ಪ್ರತ್ಯೇಕ ತಂಡಗಳನ್ನು ರಚಿಸಿದ್ದರು.

ಸುಟ್ಟು ಕರಕಲಾದ ಕಾರಿನ ಅವಶೇಷಗಳನ್ನೇ ಬೆನ್ನತ್ತಿದ ಪೊಲೀಸರು, ಮೃ*ತಪಟ್ಟ ವ್ಯಕ್ತಿಯನ್ನು ಬೆಳಗಾವಿಯ ಕನಬರಗಿ ರಸ್ತೆಯ ಚಂದ್ರಮೌಳಿ ಕಾಲೋನಿಯ ನಿವಾಸಿ ನಿತೇಶ್ ಜಗನ್ನಾಥ ಧಾಪಳೆ (35) ಎಂದು ಪತ್ತೆಹಚ್ಚಿದರು.

ಸಿಸಿಟಿವಿ ದೃಶ್ಯಾವಳಿ ಹಾಗೂ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೊ*ಲೆ ಮಾಡಿರುವುದನ್ನು ಖಚಿತಪಡಿಸಿಕೊಂಡು ಹುಬ್ಬಳ್ಳಿಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳ ವಿವರ:

 ಹಳೆ ಹುಬ್ಬಳ್ಳಿಯ ಹೆಗ್ಗೇರಿ ಮೂಲದ ಅಬ್ದುಲ್ ನಹೀಮ್ ಬಸೀರ್ ಅಹ್ಮದ್ ಮುಜಾವರ್, ದಿವಡಗಿ ಓಣಿಯ ಮೌಲಾಸಾಬ್ ಬಾಬಾಜಾನ್ ಬಾಡ, ಗಾರ್ಡನ್ ಪೇಟೆಯ ದಾದಾಪೀರ್ ಅಲಿಯಾಸ್ ಅಪ್ತಾಬ್ ಮೆಹಬೂಬ್‌ಸಾಬ್ ಬಾಳಸಂಗಿ ಬಂಧಿತ ಆರೋಪಿಗಳಾಗಿದ್ದಾರೆ.

ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ

ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬಲೆನೊ ಕಾರು, ಬರ್ಗ್‌ಮ್ಯಾನ್ (Burgman) ಮತ್ತು ಆಕ್ಟಿವಾ ಹೋಂಡಾ (Activa) ಸ್ಕೂಟರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಎಸ್.ಪಿ ದೀಪನ್ ಎಂ., ಹೆಚ್ಚುವರಿ ಎಸ್.ಪಿ ಕೃಷ್ಣಮೂರ್ತಿ ಹಾಗೂ ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ಸಿಪಿಐ ರಮೇಶ್ ಹನಾಪೂರ್ ನೇತೃತ್ವದಲ್ಲಿ ಪಿಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ತಾಂತ್ರಿಕ ವಿಭಾಗದ ಸಿಬ್ಬಂದಿ ಹಾಗೂ ಇತರ ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *