ಅಂಕೋಲಾ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಅಂಕೋಲಾದ ಮೂಲಕ ಪಟ್ಟಣದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ನಾಲ್ಸಾ ಯೋಜನೆ – 2025 ಕಾರ್ಯಕ್ರಮದ ತಳಮಟ್ಟದ ಮಾಹಿತಿ ಮತ್ತು ಪಾರದರ್ಶಕತೆಗಾಗಿ ನ್ಯಾಯ ಜಾಗೃತಿ ಅಡಿಯಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಶನಿವಾರ ನೆರವೇರಿತು.

ಕಾನೂನು ಸೇವಾ ಸಮಿತಿಯ ಪ್ರಮುಖ ವಕೀಲ ಉಮೇಶ ನಾಯ್ಕ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಕಾನೂನಿನ ತಿಳುವಳಿಕೆ ಹೊಂದಿರಬೇಕು. ಭಾರತೀಯ ಕಾನೂನು ಸಮುದ್ರವಿದ್ದಂತೆ ವಿಶಾಲ ಹರಿವು ಆದರೆ ಎಲ್ಲರಿಗೂ ಸುಲಭವಾಗಿ ದೊರೆಯುವ ದಕ್ಕುವ ರೀತಿಯಲ್ಲಿದೆ. ವಿದ್ಯಾರ್ಥಿಗಳು ಅಪರಾಧಿಕ ಕೃತ್ಯಗಳಿಗೆ ಆಕಸ್ಮಿಕವಾಗಿ ಸಿಲುಕುತ್ತಿದ್ದು ಕಾನೂನು ತಿಳುವಳಿಕೆ, ಸ್ವಯಂಪ್ರಜ್ಞೆಯ ಕೊರತೆ ಇದಕ್ಕೆ ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.ವಿದ್ಯಾರ್ಥಿಗಳಿಗೆ ತೊಂದರೆಯಾದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ನೆರವು ನೀಡುತ್ತದೆ ಎಂದರು.
ಕಾನಿಪಧ್ವ ಸಂಘದ ಅಧ್ಯಕ್ಷ ಮಾರುತಿ ಹರಿಕಂತ್ರ ಮಾತನಾಡಿ, ಹದಿಹರಿಯದ ವಿದ್ಯಾರ್ಥಿಗಳಲ್ಲಿ ಮಾನಸಿಕ ಭಾವನೆಗಳ ಬದಲಾವಣೆ ಸಹಜ. ವಿದ್ಯಾರ್ಥಿಗಳು ತಮ್ಮ ಪಾಲಕರ ಆಶಯಗಳು ಉದ್ದೇಶಗಳು ಹಾಗೂ ವಸತಿ ನಿಲಯದಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ಯೋಚಿಸಬೇಕು. ತಮ್ಮಲ್ಲಿನ ಸಾಮರ್ಥ್ಯವನ್ನು ಧನಾತ್ಮಕ ಕಾರ್ಯಗಳಿಗೆ ಉಪಯೋಗಿಸಿ, ವಿವೇಕ ಚಿಂತನೆಗಳಿಂದ ಗುರಿಗಳನ್ನು ನಿರ್ಧರಿಸಿಕೊಂಡು ಕ್ರಮಬದ್ಧವಾಗಿ ಸಾಗಬೇಕು ಎಂದರು.

ವಸತಿ ನಿಲಯದ ವಾರ್ಡನ್ ಶಿವಾನಂದ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ತಿಳುವಳಿಕೆ ಮತ್ತು ಪರೀಕ್ಷಾ ಫಲಿತಾಂಶದ ದೃಷ್ಟಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ವಸತಿ ನಿಲಯದ ಮಕ್ಕಳು ನಮ್ಮ ಮಕ್ಕಳೆಂಬ ಕಾರಣದಿಂದ ಒಳ್ಳೆಯ ಫಲಿತಾಂಶ ಬರಬೇಕು ಹಾಗೂ ವಸತಿ ನಿಲಯದಿಂದ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ಉತ್ತಮ ವಿದ್ಯಾರ್ಥಿಗಳು ಎಂಬ ಹೆಸರು ಪಡೆದುಕೊಂಡು ಉನ್ನತ ವಿದ್ಯಾಭ್ಯಾಸಕ್ಕೆ ಸಾಗಬೇಕು ಎಂದರು. ಕಾನೂನು ಸೇವಾ ಸಮಿತಿಯ ಪ್ರಮೋದ ಗೌಡ, ವಸತಿ ನಿಲಯದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


