ಕಾರವಾರ: ಕರಾವಳಿ ಭಾಗದ ಪ್ರಮುಖ ವಿವಾದಾತ್ಮಕ ಯೋಜನೆಯಾದ ಜೆಎಸ್ಡಬ್ಲ್ಯೂ ಕಂಪನಿ ಗುತ್ತಿಗೆ ಪಡೆದಿರುವ ಕೇಣಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿ ಹೋರಾಟವು ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ,ಕರಾಳ ದಿನವನ್ನು ಆಚರಿಸುವ ಮೂಲಕ ಅಂಕೋಲಾ ಬಂದ್ ಗೆ ಕರೆ ನೀಡಲಾಗಿತ್ತು,ಪಟ್ಟಣದ ಜೈಹಿಂದ ವೃತ್ತದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾವಣೆಗೊಳ್ಳುವ ಮೂಲಕ ತೀವ್ರ ಸ್ವರೂಪದ ಪ್ರತಿಭಟನೆಯನ್ನು ನಡೆಸಿದರು. ಹೋರಾಟಗಾರರು ತಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ದ ಪಟ್ಟಣದ ಪ್ರಮುಖ ಬೀದಿಯಲ್ಲಿ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಬಂದರು ಯೋಜನೆಯನ್ನು ವಿರೋಧಿಸಿ ಆಕ್ರೋಶಭರಿತ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ಈ ಸಂದರ್ಭದಲ್ಲಿ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ತಮ್ಮ ಬದುಕು ನಿರ್ಜೀವವಾಗಿದೆ ಮತ್ತು ಜನಪ್ರತಿನಿಧಿಗಳ ಪ್ರತಿಕ್ರಿಯೆ ಶೂನ್ಯವಾಗಿದೆ ಎಂಬುದನ್ನು ಸಾರಲು, ಪ್ರತಿಭಟನಾಕಾರರು ದುಃಖದ ಸಂಕೇತವಾಗಿ ಬಾಯಿ ಬಡಿದುಕೋಳ್ಳುತ್ತಾ ಸಾಗಿದರು. ಈ ವಿಶಿಷ್ಟ ಪ್ರತಿಭಟನೆಯು ಜನರ ಆಳವಾದ ದುಃಖ ಮತ್ತು ರಾಜಕೀಯ ನಾಯಕರ ಮೇಲಿನ ನಂಬಿಕೆಯ ಕುಸಿತವನ್ನು ಬಿಂಬಿಸಿತು.

ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ!
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹೋರಾಟ ಪ್ರಮುಖ ಸಂಜಯ ಬಲೆಗಾರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು. “ಈ ಬಂದರು ಯೋಜನೆಯು ಸಾವಿರಾರು ಜನರ ಜೀವನೋಪಾಯ ಮತ್ತು ಸೂಕ್ಷ್ಮ ಪರಿಸರದ ಮೇಲೆ ನೇರ ಹೊಡೆತ ನೀಡುತ್ತದೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಮನ್ನಣೆ ನೀಡದಿದ್ದರೆ, ಬಂದರು ನಿರ್ಮಿಸಲು ಹೊರಟರೆ, ನಾವು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧರಿದ್ದೇವೆ,” ಎಂದು ಅವರು ಗುಡುಗಿದರು. ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಸಚಿವರಾಗಲು ನಮ್ಮ ಮೀನುಗಾರರು ಹಾಗೂ ರೈತರಿಂದ ಆದರೆ ಈಗ ನಮ್ಮ ಗೋಳು ಕೇಳುತ್ತಿಲ್ಲ, ಬೆಂಗಳೂರಿನಲ್ಲಿ ಕುಳಿತುಕೊಂಡು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಾಣಿಜ್ಯ ಬಂದರು ಹೋರಾಟಗಾರರು ತಮ್ಮ ಜೀವನವನ್ನು ಲೆಕ್ಕಿಸದೆ ಮನೆ-ಮಠ ಬಿಟ್ಟು ಬೀದಿಗಿಳಿದಿದ್ದಾರೆ,ನಿಮಗೆ ಹಣ ಬೇಕಿದ್ದರೆ ನಾವೆಲ್ಲರೂ ನೂರು-ಸಾವಿರದಂತೆ ಹಣ ಕೂಡಿಸಿಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಈ ಅಣಕು ಶವಯಾತ್ರೆಯ ಮೂಲಕ ಪ್ರತಿಭಟನಾ ರ್ಯಾಲಿ ಸಾಗಿತು. ಒಂದು ವರ್ಷದಿಂದ ನಡೆಯುತ್ತಿರುವ ಈ ಹೋರಾಟವನ್ನು ಸರ್ಕಾರ ನಿರ್ಲಕ್ಷಿಸುತ್ತಿರುವ ಕ್ರಮವನ್ನು ಹೋರಾಟಗಾರರು ತೀವ್ರವಾಗಿ ಖಂಡಿಸಿದರು. ತಕ್ಷಣವೇ ಬಂದರು ಯೋಜನೆಯನ್ನು ರದ್ದುಗೊಳಿಸಿ, ಸ್ಥಳೀಯರ ಬದುಕಿಗೆ ಭದ್ರತೆ ಒದಗಿಸುವಂತೆ ಆಗ್ರಹಿಸಿದರು.ಇಲ್ಲವೇ ಮುಂದಿನ ಉಗ್ರ ಹೋರಾಟಕ್ಕೆ ತಯಾರಿ ನಡೆಸಿಕೊಳ್ಳಿ ಎಂದು ಸರ್ಕಾರಕ್ಕೆ ಎಚ್ಚರಿಸಿದರು.ಮುಂದಿನ ದಿನಗಲ್ಲಿ ಹೋರಾಟ ಉಗ್ರವಾಗಿ ಮುಂದುವರಿಯುವ ಸೂಚನೆ ನೀಡಿದ ಪ್ರತಿಭಟನಾಕಾರರು, ತಮ್ಮ ಬೇಡಿಕೆ ಈಡೇರುವವರೆಗೂ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದರು.

ಕೇಣಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿ ಹೋರಾಟವು ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ,ಕರಾಳ ದಿನವನ್ನು ಆಚರಿಸುವ ಮೂಲಕ ಅಂಕೋಲಾ ಬಂದ್ ಗೆ ಕರೆ ನೀಡಲಾಗಿತ್ತು, ಈ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಹೋರಾಟಕ್ಕೆ ವ್ಯಾಪಕ ಬೆಂಬಲ ಘೋಷಿಸಿದ್ದರು.


