Spread the love

​ಅಂಕೋಲಾ: ತಾಲೂಕಿನ ಹಾರವಾಡ ಸಮೀಪದ ನಿವಾಸಿಯೊಬ್ಬರ ಮನೆಯ ಕೋಳಿ ಗೂಡಿಗೆ ಬೃಹತ್ ಹೆಬ್ಬಾವೊಂದು ನುಗ್ಗಿ, ಎರಡು ಕೋಳಿಗಳನ್ನು ತಿಂದು ಕುಳಿತಿದ್ದ ಆತಂಕಕಾರಿ ಘಟನೆ ಬುಧವಾರ ಬೆಳಕಿಗೆ ಬಂದಿದೆ.

​ಹಾರವಾಡದ ನಿವಾಸಿ ವಿಷ್ಣು ನಾಯ್ಕ್ ಎಂಬುವವರ ಮನೆಯ ಕೋಳಿ ಗೂಡಿನಲ್ಲಿ ಈ ಘಟನೆ ಸಂಭವಿಸಿದೆ. ಎಂದಿನಂತೆ ಕೋಳಿ ಗೂಡಿನತ್ತ ತೆರಳಿದ ಮನೆಯವರು, ಅಲ್ಲಿ ಕೋಳಿಗಳ ಬದಲಾಗಿ ಹೆಬ್ಬಾವು ಸುರುಳಿ ಸುತ್ತಿ ಮಲಗಿರುವುದನ್ನು ಕಂಡು ತೀವ್ರ ಆತಂಕಕ್ಕೆ ಒಳಗಾಗಿದ್ದರು. ತಕ್ಷಣವೇ ಅವರು ಸ್ಥಳೀಯ ಉರಗ ಸಂರಕ್ಷಕರಾದ ಪ್ರಶಾಂತ್ ಕಳಸ ಅವರಿಗೆ ಮಾಹಿತಿ ನೀಡಿದರು.

​ಮಾಹಿತಿ ದೊರೆತ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಉರಗ ಪ್ರೇಮಿ ಪ್ರಶಾಂತ್ ಕಳಸ, ಸ್ಥಳೀಯ ಸಾರ್ವಜನಿಕರ ಸಹಕಾರದೊಂದಿಗೆ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗೂಡಿನಲ್ಲಿದ್ದ ಎರಡು ಕೋಳಿಗಳನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೆ ಅಲ್ಲೇ ಮಲಗಿದ್ದ ಹೆಬ್ಬಾವನ್ನು ಅತ್ಯಂತ ಎಚ್ಚರಿಕೆಯಿಂದ ಮತ್ತು ಯಾವುದೇ ಹಾನಿಯಾಗದಂತೆ ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ಸೆರೆಹಿಡಿದರು.

ಸೆರೆಹಿಡಿದ ಹೆಬ್ಬಾವನ್ನು ನಂತರ ಅರಣ್ಯ ಇಲಾಖೆಯ ನಿಯಮಾವಳಿಗಳಂತೆ ಯಲ್ಲಾಪುರ-ಅಂಕೋಲಾ ಗಡಿಯ ದಟ್ಟ ಅರಣ್ಯ ಪ್ರದೇಶಕ್ಕೆ ತರಳಿ, ಅದರ ನೈಸರ್ಗಿಕ ವಾಸಸ್ಥಾನಕ್ಕೆ ಸುರಕ್ಷಿತವಾಗಿ ಬಿಡುವ ಮೂಲಕ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

​ಇದೇ ಸಂದರ್ಭದಲ್ಲಿ ಮಾತನಾಡಿದ ಉರಗ ಸಂರಕ್ಷಕ ಪ್ರಶಾಂತ್ ಕಳಸ, ವನ್ಯಜೀವಿಗಳು ಅಥವಾ ಇಂತಹ ಹೆಬ್ಬಾವುಗಳು ಜನವಸತಿ ಪ್ರದೇಶಕ್ಕೆ ನುಗ್ಗಿದಾಗ ಸಾರ್ವಜನಿಕರು ಆತಂಕಗೊಂಡು ಅವುಗಳಿಗೆ ಯಾವುದೇ ರೀತಿಯ ಹಾನಿ ಮಾಡಬಾರದು. ತಕ್ಷಣವೇ ಅರಣ್ಯ ಇಲಾಖೆಗಾಗಲಿ ಅಥವಾ ನಮ್ಮಂತಹ ಉರಗ ಸಂರಕ್ಷಕರಿಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *