Spread the love

ಅಂಕೋಲಾ: ಮಾರ್ಚ್ 8 ರಂದು ಗಾಂವಕರ ಮೆಮೋರಿಯಲ್ ಪೌಂಡೇಶನ್ ಬಾಸಗೋಡ  ವತಿಯಿಂದ 13 ನೇ ವರ್ಷದ ಪ್ರತಿಭಾ ಪುರಸ್ಕಾರ ನಡೆಯಲಿದ್ದು,ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಗಾಂವಕರ ಮೆಮೋರಿಯಲ್  ಪೌಂಡೇಶನ್ ಅಧ್ಯಕ್ಷರಾದ ದೇವಾನಂದ ಗಾಂವ್ಕರ್ ಹೇಳಿದರು.

ಅವರು ಪಟ್ಟಣದ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಚಾರಿತ್ರಿಕ ಹಿನ್ನೆಲೆ ಹಾಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿ ಗುರುತಿಸಿಕೊಂಡ ಬಾಸಗೋಡದ ಗೌರವಾನ್ವಿತ ಮನೆತನದಿಂದ ಬಂದ ಸ್ವಾತಂತ್ರ್ಯ ಯೋಧ ಬೊಮ್ಮಯ್ಯ ರಾಕು ಗಾಂವಕರ ಸರಳ, ಸಜ್ಜನ, ಪ್ರಾಮಾಣಿಕತೆ, ಕರ್ತವ್ಯ ದಕ್ಷತೆ, ವಿನಯಶೀಲತೆ ಮೂಲಕ ಸಮಾಜದ ಅಭಿವೃದ್ಧಿಗೆ ದುಡಿದ ಪ್ರಾಮಾಣಿಕ ವ್ಯಕ್ತಿಯಾಗಿ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.

ಉತ್ಸಾಹಿ ಸ್ವಾತಂತ್ರ್ಯಯೋಧರಾಗಿ ಶಿಕ್ಷಣ ಪ್ರೇಮಿಯಾಗಿ, ಧಾರ್ಮಿಕ ರಂಗದ ಮುಂದಾಳುವಾಗಿ, ಚಿಂತಕರಾಗಿ ಖ್ಯಾತ ಯಕ್ಷಗಾನ ಕಲಾವಿದರಾಗಿ ತಾಳಮದ್ದಲೆಯ ಶ್ರೇಷ್ಠ ಅರ್ಥಧಾರಿಯಾಗಿ ನ್ಯಾಯ ಪಂಚಾಯಿತಿಯ ನಿರ್ಣಾಯಕರಾಗಿ, ಸಹಕಾರಿ ಕ್ಷೇತ್ರದ ಧುರೀಣರಾಗಿ ಪ್ರಗತಿಪರ ಕೃಷಿಕರಾಗಿ ಹೀಗೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ನಾಗರಿಕ ಸಮಾಜದ ಆದರ್ಶ ವ್ಯಕ್ತಿಯಾಗಿ ಬಾಳಿದ ಬೊಮ್ಮಯ್ಯ ಗಾಂವಕರರು ತಮ್ಮ ಸ್ನೇಹಿಪರ ನಡುವಳಿಕೆಯಿಂದ ಸುತ್ತಮುತ್ತಲಿನ ಪರಿಸರದ, ಸಮಾಜದ ಎಲ್ಲಾ ವರ್ಗದ ಜನರಿಗೆ ಚಿರಪರಿಚಿತರಾಗಿ ಆತ್ಮೀಯ ವ್ಯಕ್ತಿಯಾಗಿದ್ದರು.

“ನಾವು ಬೆಳೆಯಬೇಕು ನಮ್ಮವರು ಬೆಳೆಯಬೇಕು” ಎಂಬ ಸದುದ್ದೇಶದ ವಿಚಾರ ಹೊಂದಿದ್ದ ಹಾಗೂ ಪ್ರತಿಯೊಂದು ಕ್ಷೇತ್ರದ ಒಳ್ಳೆಯ ಕೆಲಸಕ್ಕೆ ಶಹಬ್ಬಾಸ್ ಎಂದು ಬೆನ್ನು ತಟ್ಟಿ ಉತ್ತೇಜನ ನೀಡುತ್ತಿದ್ದ ಬೊಮ್ಮಯ್ಯ ಗಾಂವಕರ ಜೀವನ ಹಾಗೂ ಸಾಧನೆ ಖಂಡಿತವಾಗಿಯೂ ಮುಂದಿನ ಪೀಳಿಗೆಯನ್ನು ಉತ್ತೇಜಿಸಿ ಅವರ ಬದುಕಿಗೆ ದಾರಿ ದೀಪವಾಗಬಹುದು ಎಂಬ ನಿಟ್ಟಿನಲ್ಲಿ ಹಿರಿಯರ ಸಾಧನೆಯನ್ನು ಗೌರವಿಸುವ, ಅವರ ಬೆಳಕಲ್ಲಿ ತಮ್ಮ ಬಾಳ ಪಯಣ ಮುಂದುವರೆಸುವ ಕಿರಿಯರ ಸಂಕಲ್ಪವೇ ಈ ಕಾರ್ಯಕ್ರಮ ಈ ನಿಟ್ಟಿನಲ್ಲಿ 2012 ರಲ್ಲಿ ಸ್ಥಾಪನೆಯಾದ ಗಾಂವಕರ ಮೆಮೋರಿಯಲ್ ಫೌಂಡೇಶನ್ ದಿ. ಬೊಮ್ಮಯ್ಯ ಗಾಂವಕರರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಒಂದೆಡೆ ದಾಖಲು ಮಾಡಿ “ಬಹುಮುಖಿ” ಪುಸ್ತಕವನ್ನು ಪ್ರಕಟಿಸಿದೆ. ಕಳೆದ 12 ವರ್ಷಗಳಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಉತ್ತರಕನ್ನಡ ಜಿಲ್ಲೆಯ ಯುವ ಪ್ರತಿಭೆಗಳಿಗೆ ಯುವ ಪ್ರತಿಭಾ ಪುರಸ್ಕಾರ ನೀಡಲಾಗಿದೆ.

ಯುವ ಜನಾಂಗಕ್ಕೆ ಸ್ಫೂರ್ತಿ ಹಾಗೂ ಉತ್ತೇಜನ ನೀಡುವ ಉದ್ದೇಶದಿಂದ ಗೌರವಾನ್ವಿತರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುತ್ತ ಬಂದಿರುತ್ತದೆ. ಫೌಂಡಶನ್ನಿನ ಹಿರಿಯರ ಹೆಸರಿನಲ್ಲಿ ಶೈಕ್ಷಣಿಕ, ಕ್ರೀಡೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಪ್ರೋತ್ಸಾಹಿಕ ನೆರವು ನೀಡುತ್ತ ಉತ್ತೇಜನ ನೀಡುತ್ತ ಬಂದಿದೆ. ಅದರಂತೆ ಈ ವರ್ಷದ ಕಾರ್ಯಕ್ರಮದಲ್ಲಿ ಸಮಗ್ರ ಮಾಹಿತಿಯನ್ನೊಳಗೊಂಡ ಪರಿಷ್ಕೃತ’ ಬಹುಮುಖಿ ‘ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.

ಸ್ವಾತಂತ್ರ್ಯ ಯೋಧ ಬಹುಮುಖಿ ಅಭಿವೃದ್ಧಿ ಹರಿಕಾರ ವಾಸಗೋಡ ಬೊಮ್ಮಯ್ಯ ರಾಕು ಗಾಂವಕರ ಹಾಗೂ ಆದರ್ಶ ಗೃಹಿಣಿ ಪಾರ್ವತಿ ಗಾಂವಕರ ಮತ್ತು ಗಾಂವಕರ ಕುಟುಂಬದ ಹಿರಿಯರ ನೆನಪಿನಲ್ಲಿ ಸಂಘಟಿಸಲ್ಪಟ್ಟಿರುವ 13 ನೇ ವರ್ಷದ ಯುವ ಪ್ರತಿಭಾ ಪುರಸ್ಕಾರ ಮತ್ತು ಉಪನ್ಯಾಸ ಕಾರ್ಯಕ್ರಮ 2026 ನೇ ಮಾರ್ಚ 08 ರವಿವಾರ ಸಂಜೆ 4.00 ಗಂಟೆಗೆ “ಸಾಧನಾ” ವೇದಿಕೆ ಸ್ವಾತಂತ್ರ್ಯ ಸಂಗ್ರಾಮ ಭವನ ಅಂಕೋಲಾದಲ್ಲಿ ನಡೆಯಲ್ಲಿದ್ದು ಯುವ ಜನಾಂಗಕ್ಕೆ ಸಿನಿಮಾ ಕ್ಷೇತ್ರದ ಬಗ್ಗೆ ಒಲವು ಹೆಚ್ಚಿರುವುದರಿಂದ ಆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಹಾಗೂ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮತ್ತು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರೇರಣೆಯಾಗಲಿ ಎಂಬ ಸದುದ್ದೇಶದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಚಲನಚಿತ್ರ ನಟಿ ಹಾಗೂ ಭುವನಂ ಫೌಂಡೇಶನ್ ಬೆಂಗಳೂರು ಇದರ ಮುಖ್ಯಸ್ಥೆ ‘ಹರ್ಷಿಕಾ ಪೂಣಚ್ಚ ರವರನ್ನು ಕಾರ್ಯಕ್ರಮದ ಉದ್ಘಾಟಕರಾಗಿ ಹಾಗೂ “ಬಹುಮುಖಿ” ಪುಸ್ತಕ ಬಗ್ಗೆ ಹಿರಿಯರು ಇನ್ನಷ್ಟು ಮಾಹಿತಿ ಒದಗಿಸಿರುವುದರಿಂದ ಮತ್ತು ಬೊಮ್ಮಯ್ಯ ರಾಕು ಗಾಂವಕರ ಬಗ್ಗೆ ಬಹಳಷ್ಟು ಮಹನೀಯರು ಅವರ ವ್ಯಕ್ತಿತ್ವದ ಬಗ್ಗೆ ಈ ಹಿಂದೆ ನೀಡಿದ ಮಾಹಿತಿ ನೀಡಿರುವ ದಾಖಲೆ ದೊರೆತಿರುವುದರಿಂದ ಇವೆಲ್ಲವನ್ನು ಹೊರಗಿಡದೇ ಒಳಗೆ ತೆಗೆದುಕೊಂಡು ಸಮಗ್ರ ಮಾಹಿತಿಯನ್ನೊಳಗೊಂಡ “ಪರಿಷ್ಕೃತ ಬಹುಮುಖ” ಪುಸ್ತಕ ಇದೇ ವೇದಿಕೆಯಲ್ಲಿ ಹರ್ಷಿಕಾ ಪೂಣಚ್ಚರವರು ಲೋಕಾರ್ಪಣೆ ಮಾಡುವ ಕಾರ್ಯಕ್ರಮ ಇಟ್ಟುಕೊಂಡಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾವಳಿ ಮುಂಜಾವು ದಿನಪತ್ರಿಕೆ ಕಾರವಾರ ಇದರ ವ್ಯವಸ್ಥಾಪಕ ಸಂಪಾದಕರಾದ ಗಂಗಾಧರ ಹಿರೇಗುತ್ತಿ ವಹಿಸಲ್ಲಿದ್ದು, ಇದೇ ಸಂದರ್ಭದಲ್ಲಿ ಕೆ.ಎಲ್.ಇ.ಎಸ್.ಡಾ. ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವಿ ಇದರ ವೈದ್ಯರಾದ ಡಾ.ರಣಜಿತ ಬೀರಣ್ಣ ನಾಯಕ ಕೆಂಚನ್ ರವರಿಗೆ ಗೌರವಾರ್ಪಣೆ ನಡೆಯಲಿದ್ದು ಅಂದು ಡಾ. ರಣಜಿತ ಬೀರಣ್ಣ ನಾಯಕ, ಕೆಂಚನ್ ಅವರಿಂದ “ರಾಷ್ಟ್ರ ನಿರ್ಮಾಣದಲ್ಲಿ ಯುವ ಜನಾಂಗದ ಪಾತ್ರ’ದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಪ್ರತಿ ವರ್ಷದಂತೆ ಉತ್ತರ ಕನ್ನಡ ಜಿಲ್ಲೆಯ 10 ತಾಲೂಕುಗಳ, 10 ವಿವಿಧ ಕ್ಷೇತ್ರಗಳ 10 ಯುವ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ಚರಿತ್ರೆಯಲ್ಲಿ ಅಮರಳಾದ ಅಂಕೋಲಾ ವಾಸರೆಯ ಮಾಣು ದೇವಿ ನಾಯಕ ಸ್ಮರಣೆ ಕಾರ್ಯಕ್ರಮ ಹಾಗೂ ಇಂದಿನ ದಿನಮಾನದಲ್ಲಿ ನಮ್ಮ ಸಂವಿಧಾನದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯವಿರುವುದರಿಂದ ಸಂವಿಧಾನದ ಆಶಯಗಳನ್ನು ಪಾಲಿಸುವುದು ಅವಶ್ಯ ಇರುವುದರಿಂದ ಸಂವಿಧಾನದ ಮಹತ್ವದ ಅರಿವು ಮೂಡಿಸಲು ವಿದ್ಯಾ ಸಂಸ್ಥೆಗಳಿಗೆ ನ್ಯಾಯಮೂರ್ತಿ ನಾಗಮೋಹನ್ ದಾಸರವರು ಬರೆದ “ಸಂವಿಧಾನ ಓದು” ಪುಸ್ತಕ ಕೊಡುಗೆ ಹಾಗೂ ಕಾರ್ಯಕ್ರಮದ ಪ್ರಾರಂಭದಲ್ಲಿಯೇ ಸಂವಿಧಾನದ ಅರಿವು ಮೂಡಿಸಲು ಸಂವಿಧಾನ ಪೀಠಿಕೆ ಸಭೆಯಲ್ಲಿ ಓದಿ ಹೇಳುವ ವಿಚಾರವನ್ನು ಹೊಂದಲಾಗಿದೆ ಮತ್ತು ಖ್ಯಾತ ಗಾಯಕರಾದ ಮೀನಾಕ್ಷಿ ಪಾಟೀಲ್ ಕಾರವಾರ ಹಾಗೂ ದೀಪ್ತಿ ಆರ್ಗೆಕರ್ ಕಾರವಾರ ಇವರಿಂದ ಗಾಯನ ಹಾಗೂ ಇಂಜಿನಿಯರಿಂಗ್ ಪದವಿದರೆ ಕುಮಾರಿ ಪೃಥ್ವಿ ದೇವಾನಂದ ಗಾಂವಕರ ಬಾಸಗೋಡ ಹಾಗೂ ಬಿ.ಸಿ.ಎ. ವಿದ್ಯಾರ್ಥಿ ಪುನೀತ ಮಾರುತಿ ನಾಯ್ಕ ಹನುಮಟ್ಟಾ ಅಂಕೋಲಾ ಇವರಿಂದ ಯಕ್ಷನೃತ್ಯ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ನಿರೂಪಕಿಯರಾದ ರೇಡಿಯೋ ಜಾಕಿ ಮಾಧುರಿ ಮೋನಪ್ಪ ನಾಯಕ ಬಾಸಗೋಡ ಹಾಗೂ ಶಿಲ್ಪಾ ನಾಯ್ಕ ಕಾರವಾರ ಇವರು ನಿರ್ವಹಿಸಲಿದ್ದಾರೆ. ಜಾನಪದ ಸೊಗಡಿನ ಹಿಂದಿನ ಹಳೆಯ ಪರಿಕರದೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸುವ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ ಎಂದು ಗಾಂವಕರ ಮೆಮೋರಿಯಲ್ ಫೌಂಡೇಶನ್ ಅಧ್ಯಕ್ಷರಾದ ಬಾಸಗೋಡದ ದೇವಾನಂದ ಬೊಮ್ಮಯ್ಯ ಗಾಂವಕರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕರ್ನಾಟಕ ಸೀನಿಯರ್ ನ್ಯಾಶನಲ್ ಲಗೋರಿ ತಂಡಕ್ಕೆ ಆಯ್ಕೆಯಾದ ದೇಸಿ ಪ್ರತಿಭೆ ಸಾಯಿನಾಥ ಮಾನು ಧವನ ಜೋಯಿಡಾ,ಸೃಜನಶೀಲತೆ ವಿಭಾಗದಲ್ಲಿ ಮಹಾತ್ಮಾ ಮಂಜುನಾಥ ಜೈನ,ಭರತನಾಟ್ಯ ಕ್ಷೇತ್ರದಲ್ಲಿ ಶಮಿತಾ ರಾಜಶೇಖರ ನಾಯ್ಕ ಮುಂಡಗೋಡ,ಯಕ್ಷಗಾನ ಕ್ಷೇತ್ರದಲ್ಲಿ ಆತ್ರೇಯ ರವೀಶ ಗಾಂವಕರ ಯಲ್ಲಾಪುರ, ದೇಶಭಕ್ತಿ ವಿಭಾಗದಲ್ಲಿ ವಾಯುಪಡೆಯ ಮಹಿಳಾ ಫೈಯಿಂಗ್ ಆಫೀಸರ್ ಆಗಿರುವ ಸಾಯಿಶ್ರೀ ಅರುಣ ನಾಯ್ಕ ಕಾರವಾರ,ಕೌಶಲ್ಯ ವಿಭಾಗದಲ್ಲಿ ಯಶವಂತ ಸೈಮನ್ ದಿವಟೆ,ಶೈಕ್ಷಣಿಕ ಕ್ಷೇತ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಎಂ.ಎಸ್ಸಿ ರಸಾಯನಶಾಸ್ತ್ರ ವಿಭಾಗದಲ್ಲಿ 24 ಬಂಗಾರದ ಪದಕ ಪಡೆದ ಎನ್ ಅದಿತಿ,ಕ್ರೀಡಾ ವಿಭಾಗದಲ್ಲಿ ನವನೀತ ನವೀನ ಕಾಮತ ದಾಂಡೇಲಿ,ಫ್ಯಾಷನ್ ಡಿಸೈನಿಂಗ್ ವಿಭಾಗದಲ್ಲಿ ಶಫೀಕಾ ಎಂ ಕಾಗದ ಹಳಿಯಾಳ, ಲೆಕ್ಕಶಾಸ್ತ್ರ ವಿಭಾಗದಲ್ಲಿ ಕಲ್ಪನಾ ಮಾಸ್ತಿ ಮೊಗೇರ ಭಟ್ಕಳ ಇವರಿಗೆ ಸನ್ಮಾನಿಸಿ ಗೌರವಿಸಲಾಗುವದು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಕ್ಷಯ್ ಆರ್ ಗಾಂವಕರ ಸದಸ್ಯರಾದ ವಿನಯ ಆರ್ ನಾಯಕ,ವನಿತಾ ಡಿ ಗಾಂವಕರ,ಗಣಪತಿ ಆರ್ ನಾಯಕ,ಮುಕುಂದ ಎಮ್ ನಾಯಕ, ಪುರಲಕ್ಕಿಬೇಣ, ಗೋಪಾಲ ಆರ್. ನಾಯಕ,ಸಾತು ನಾರಾಯಣ ನಾಯಕ, ,ರಾಮು ಟಿ. ನಾಯಕ,ಗೌರೀಶ್ ಟಿ ನಾಯ್ಕ,ಭಾರತಿ ಹಮ್ಮಣ್ಣ ನಾಯಕ,ಎಸ್ ಆರ್ ಉಡುಪಿ,ಕೇಶವಾನಂದ ನಾಯಕ,ಗಣಪತಿ ನಾಯಕ ಶಿಳ್ಯ,ಸದಾನಂದ ಶೆಟ್ಟಿ,ಯಮುನಾ ಗಾಂವ್ಕರ್, ಸರ್ಸಿ ಅರುಣ ನಾಯಕ,ನಾಗವೇಣಿ ಮುಕುಂದ ನಾಯಕ,ಸುಮತಿ ಗಾಂವ್ಕರ್,ವಿಜಯಕುಮಾರ್ ನಾಯ್ಕ,ರತ್ನಾಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *