ಅಂಕೋಲಾ: ಗೃಹ ಸಚಿವರ ಅತ್ಯಾಪ್ತ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಪ್ರಭಾವಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕರವರ ಮೇಲೆ ಗೋವಾ ನೋಂದಣಿಯ(GA05D0338) ಪೋರ್ಡ್ ಫಿಗೊ ಕಾರಿನಲ್ಲಿ ಬಂದಿದ್ದ ಆರು ಜನ ದುಷ್ಕರ್ಮಿಗಳಿಂದ ಏಕಾಏಕಿ ಹತ್ಯೆಗೆ ಯತ್ನ ನಡೆದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅನುಮಾನಾಸ್ಪದವಾಗಿ ಗೋವಾಗೆ ತೆರಳುತ್ತಿದ್ದ ಬಿಹಾರ ಮೂಲದ ನಾಲ್ವರನ್ನು ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ.

ಹೌದು… ಪಟ್ಟಣದ ಕಣಕಣೇಶ್ವರ ದೇವಸ್ಥಾನದ ಬಳಿ ಇರುವ ಕ್ಷೌರದ ಅಂಗಡಿಗೆ ಬುಧವಾರ ಬೆಳಿಗ್ಗೆ ಕ್ಷೌರಕ್ಕೆ ತೆರಳಿದ್ದ ಗೋಪಾಲಕೃಷ್ಣ ನಾಯಕ ಕ್ಷೌರದ ಬಳಿಕ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಏಕಾಏಕಿ ಚಾಕು ಹಾಗೂ ಕಬ್ಬಿಣದ ರಾಡ್ ಗಳಿಂದ ದಾಳಿ ನಡೆಸಿದ್ದು,ನಾಯಕ್ ಅವರ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಚುಚ್ಚಿದ್ದು, ಈ ದಾಳಿಯಿಂದ ತಪ್ಪಿಸಿಕೊಂಡ ಗೋಪಾಲಕೃಷ್ಣ ನಾಯಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದ್ದು,ಅವರನ್ನು ಹತ್ತಿರದ ಆರ್ಯ ಮೆಡಿಕಲ್ ಗೆ ದಾಖಲಿಸಲಾಗಿತ್ತು ಹಾಗೆಯೇ ಹೆಚ್ಚಿನ ಚಿಕಿತ್ಸೆಗೆ ಹೊನ್ನಾವರದ ಸೇಂಟ್ ಇಗ್ನಿಶಿಯಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೃಹ ಸಚಿವ ಡಾ. ಜಿ ಪರಮೇಶ್ವರರವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ನೇರ ನುಡಿ ವ್ಯಕ್ತಿತ್ವದವರಾಗಿದ್ದು ಅಂಕೋಲಾ ಕಾರವಾರ ಕ್ಷೇತ್ರದಲ್ಲಿ ಅನೇಕ ಸಾಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗುವ ಮೂಲಕ ಜಿಲ್ಲೆಯಾದ್ಯಂತ ಗುರುತಿಸಿಕೊಂಡಿದ್ದರು.

ಪಟ್ಟಣದ ಕಣಕಣೇಶ್ವರ ದೇವಸ್ಥಾನದ ಬಳಿ ಗೋಪಾಲಕೃಷ್ಣ ನಾಯಕ ಅವರು ಇದ್ದ ಸಮಯದಲ್ಲಿ, ಗೋವಾ ನೋಂದಣಿಯ ಕಾರಿನಲ್ಲಿ ಬಂದ ಆರು ಜನರ ತಂಡವೊಂದು ಏಕಾಏಕಿ ಅವರ ಮೇಲೆ ದಾಳಿ ಮಾಡಿದೆ. ಚೂರಿಯಿಂದ ಇರಿಯಲು ಯತ್ನಿಸಿದ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಗೋಪಾಲಕೃಷ್ಣ ಅವರು ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಯ ವೇಳೆ ಗೋಪಾಲಕೃಷ್ಣ ಅವರು ಸಮಯಪ್ರಜ್ಞೆ ಮೆರೆದು ಕಿಡಿಗೇಡಿಗಳಿಂದ ತಪ್ಪಿಸಿಕೊಂಡಿದ್ದರಿಂದ ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ. ಹಲ್ಲೆ ನಡೆಸಿದ ಬಳಿಕ ದುಷ್ಕರ್ಮಿಗಳು ಅದೇ ವಾಹನ ಅಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.ಕಳೆದ ಕೆಲ ದಿನಗಳಿಂದ ಪಟ್ಟಣದ ಹೋಟೆಲ್ ಒಂದರಲ್ಲಿ ಆಗಂತುಕರು ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ.

ದಾಳಿಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.ಈ ದಾಳಿ ಏತಕ್ಕಾಗಿ ನಡೆದಿದೆ ಎನ್ನುವುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಅನುಮಾನಸ್ಪದವಾಗಿ ಗೋವಾಕ್ಕೆ ತೆರಳುತ್ತಿದ್ದ ಬಿಹಾರ ಮೂಲದ ನಾಲ್ವರನ್ನು ಕಾರವಾರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಗೆಯೇ ಗೋವಾ ನೋಂದಣಿಯ ಕಾರಿನ ಮಾಲಕರ ಪತ್ತೆಗಾಗಿ ಹಾಗೂ ಘಟನೆಯಲ್ಲಿ ಭಾಗಿಯಾದವರ ಚಹರೆ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.


