ಅಂಕೋಲಾ: ಹಾಲಕ್ಕಿ ಸಮುದಾಯ ಶ್ರಮಿಕ ವರ್ಗಕ್ಕೆ ಸೇರಿದವರಾಗಿದ್ದರು ಕಷ್ಟದ ಬದುಕಿನ ನಡುವೆಯೂ ಶಿಸ್ತಿನ ಸಿಪಾಯಿಗಳಂತೆ ತಮ್ಮ ಕಾರ್ಯಕ್ಷಮತೆಯಿಂದ ಸಾಮಾಜಿಕ ಕಳಕಳಿಯನ್ನು ತೋರುತ್ತಿರುವುದು ಶ್ಲಾಘನೀಯ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ಅವರು ತಾಲೂಕಿನ ಬೆಳಸೆ ಗ್ರಾಪಂ ವ್ಯಾಪ್ತಿಯ ಭಾಗದತುಂಡು ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಗೆಳೆಯರ ಬಳಗದ ವತಿಯಿಂದ ಅಯೋಜನೆಗೊಂಡಿದ್ದ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಹಾಲಕ್ಕಿ ಸಮುದಾಯದವರ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಗವಹಿಸಿ ಮಾತನಾಡಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ನಮ್ಮ ಹೆಮ್ಮೆಯ ಮೆರಾಗುಗಳಾದ ತುಳಸಿ ಗೌಡ ಹಾಗೂ ಸುಕ್ರಿ ಗೌಡರ ತಮ್ಮ ತಮ್ಮ ಕ್ಷೇತದಲ್ಲಿರುವ ಕಾರ್ಯಕ್ಷಮತೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದ್ದಾರೆ. ಪದ್ಮಶ್ರೀ ದ್ವಯರು ಇಂದು ನಮ್ಮ ಜೊತೆ ಇಲ್ಲದಿದ್ದರೂ ಸಹ ಅವರು ಮಾಡಿದ ಕಾರ್ಯ ಅಜರಾಮರವಾಗಿದೆ.

ನಾನು ನನ್ನ ಆಡಳಿತಾವಧಿಯಲ್ಲಿ ಪಕ್ಷಭೇದ ಇಲ್ಲದೆ ಕರ್ತವ್ಯ ನಿರ್ವಹಿಸಿದ್ದೇನೆ. ರಾಜಕಾರಣ ಬದಿಗಿಟ್ಟು ನಿಮ್ಮ ಜೊತೆ ನಾನು ಎಂದೆಂದಿಗೂ ಇದ್ದೇನೆ, ಹಾಲಕ್ಕಿ ಸಮಾಜದ ಯುವಕರು ಒಗ್ಗಟ್ಟಾಗಿ ಮುನ್ನೆಲೆಗೆ ಬರಬೇಕು,ನೀವು ಮುನ್ನೆಲೆಗೆ ಬಂದರೆ ಮಾತ್ರ ನಿಮ್ಮ ಸಮಾಜದ ಆಶಯ ಈಡೇರಲು ಸಾಧ್ಯ. ಮುಂದಿನ ದಿನಗಲ್ಲಿ ನಿಮ್ಮ ಎಲ್ಲಾ ಕಷ್ಟ ಸುಖಗಳಲ್ಲಿ ನಾನಿದ್ದೇನೆ ಎಂದರು.

ಅಗ್ರಗೊಣ ಗ್ರಾಪಂ ಮಾಜಿ ಅಧ್ಯಕ್ಷ ರಾಘವೇಂದ್ರ ಗೌಡ ಮಾತನಾಡಿ ಮೊದಲ ವರ್ಷವೇ ವಾಲಿಬಾಲ್ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಅಯೋಜಿಸಿರುವುದು ಶ್ಲಾಘನೀಯ, ನಮ್ಮ ಹಾಲಕ್ಕಿ ಸಮಾಜ ಶ್ರಮಿಕ ವರ್ಗದವರಾಗಿದ್ದು ನಮ್ಮ ಸಮುದಾಯ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಕ್ರೀಡೆಯೊಂದಿಗೆ ಶಿಕ್ಷಣಕ್ಕೂ ಹೆಚ್ಚಿನ ಮಹತ್ವವನ್ನು ನೀಡಿದರೆ ಮಾತ್ರ ಆರ್ಥಿಕವಾಗಿ ಸದೃಢವಾಗಲು ಸಾಧ್ಯ. ನಮ್ಮ ಸಮುದಾಯವನ್ನು ಎಲ್ಲಾ ರೀತಿಯಲ್ಲೂ ತಾಯಿಯಂತೆ ಪ್ರೀತಿ ತೋರಿಸುತ್ತಾ ಬೆಳೆಸುತ್ತಿರುವ ರೂಪಾಲಿ ನಾಯ್ಕ ರವರಿಗೆ ನಾವು ಎಂದಿಗೂ ಚಿರಋಣಿ ಎಂದರು.

ಈ ವೇಳೆಯಲ್ಲಿ ಶ್ರೀ ದುರ್ಗಾದೇವಿ ಗೆಳೆಯರ ಬಳಗದಿಂದ ರೂಪಾಲಿ ನಾಯ್ಕರವರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಳಾಧ್ಯಕ್ಷ ಸಂಜಯ ನಾಯ್ಕ,ಬೆಳಸೆ ಗ್ರಾಪಂ ಮಾಜಿ ಅಧ್ಯಕ್ಷೆ ಶೋಭಾ ನಾಯಕ್,ಸುಭಾಷ್ ಗುನಗಿ, ಮಂಕಾಳು ಗೌಡ, ಸುಜಾತಾ ಬಾಂದೇಕರ್,ಸೋಮಿ ಗೌಡ ಮತ್ತಿತರರು ಉಪಸ್ಥಿತರಿದ್ದರು.


