Spread the love

ಕಾರವಾರ: ಸೈಬರ್ ವಂಚಕರ ಜಾಲ ದಿನೇ ದಿನೇ ವಿಸ್ತಾರವಾಗುತ್ತಿದ್ದು, ಇದೀಗ ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ನಿವೃತ್ತ ನೌಕರರೊಬ್ಬರಿಗೆ ಬರೋಬ್ಬರಿ 21,76,100 ರೂ. ವಂಚಿಸಿರುವ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕೈಗಾ ಟೌನ್‌ಶಿಪ್‌ನ ಮಲ್ಲಾಪುರದಲ್ಲಿ ವಾಸ್ತವ್ಯವಿರುವ, ಮೂಲತಃ ಶಿರಸಿಯ ಗಾಳಿಮಾಸ್ತಿ ದೇವಸ್ಥಾನ ರಸ್ತೆಯ ನಿವೃತ್ತ ನೌಕರ ಮೆಥ್ಯು ಡಿಯೋಗ ಫರ್ನಾಂಡಿಸ್ (60) ಎಂಬುವವರೇ ವಂಚನೆಗೊಳಗಾದ ದುರ್ದೈವಿ. ಈ ಕುರಿತು ಕಾರವಾರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಚ್ 10, 2026 ರಂದು ಮೆಥ್ಯು ಅವರ ವಾಟ್ಸಾಪ್ ನಂಬರ್‌ಗೆ ಅಪರಿಚಿತ ಸಂಖ್ಯೆಯಿಂದ ಸಂದೇಶವೊಂದು ಬಂದಿತ್ತು. 222 VIP New Berry Core Strategy ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಅತೀ ಹೆಚ್ಚು ಹಣ ಗಳಿಸಬಹುದು ಎಂಬ ಆಕರ್ಷಕ ಸಂದೇಶ ಅದಾಗಿತ್ತು. ಇದನ್ನು ನಂಬಿದ ಮೆಥ್ಯು ಅವರು, ಸಂದೇಶದ ಕೆಳಗಿದ್ದ ಲಿಂಕ್ ಕ್ಲಿಕ್ ಮಾಡಿದಾಗ NBCPL (New Berry Credit Pvt Ltd Mumbai) ಎಂಬ ಹೆಸರಿನ ಟ್ರೇಡಿಂಗ್ ಆಪ್‌ನ ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆಗೊಂಡಿದ್ದಾರೆ. ಆ ಗ್ರೂಪ್‌ನ ಅಡ್ಮಿನ್‌ಗಳಾಗಿದ್ದ ಮೀನಾ ಜೋಶಿ ಮತ್ತು ರಾಜೇಶ್ ಮೋಡಿ ಎಂಬುವವರು ಆನ್‌ಲೈನ್ ಟ್ರೇಡಿಂಗ್ ಮೂಲಕ ಹಣ ಹೂಡಿಕೆ ಮಾಡಿ ಲಾಭ ಗಳಿಸುವ ಬಗ್ಗೆ ನಕಲಿ ತರಬೇತಿಯನ್ನು ನೀಡಲು ಪ್ರಾರಂಭಿಸಿದ್ದಾರೆ.

ವಂಚಕರ ಮಧುರ ಮಾತುಗಳನ್ನು ಮತ್ತು ಅವರು ನೀಡಿದ ತರಬೇತಿಯನ್ನು ಸಂಪೂರ್ಣವಾಗಿ ನಂಬಿದ ಮೆಥ್ಯು ಅವರು, ಆ ಖದೀಮರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲು ಶುರು ಮಾಡಿದ್ದಾರೆ. ಮಾರ್ಚ್ 12, 2026 ರಿಂದ ಏಪ್ರಿಲ್ 07, 2026 ರ ನಡುವಿನ ಕೇವಲ ಒಂದು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 21,76,100 ರೂ.ಗಳನ್ನು ವಂಚಕರ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಆದರೆ, ತಾವು ಹೂಡಿಕೆ ಮಾಡಿದ ಹಣಕ್ಕೆ ಯಾವುದೇ ಲಾಭಾಂಶವಾಗಲೀ ಅಥವಾ ಅಸಲು ಹಣವಾಗಲೀ ಮರಳಿ ಬರದೇ ಇದ್ದಾಗ ತಾನು ಮೋಸಹೋಗಿರುವುದು ಮೆಥ್ಯು ಅವರ ಅರಿವಿಗೆ ಬಂದಿದೆ. ಈ ಸಂಬಂಧ ಕಾರವಾರದ ಸೈಬರ್ ಕ್ರೈಂ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಕಲಂ 66(2) ಹಾಗೂ ಬಿಎನ್‌ಎಸ್ ಕಲಂ 319(2), 318(4) ರ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಂಚಕರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

Leave a Reply

Your email address will not be published. Required fields are marked *