ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರಿನಕಟ್ಟೆಯಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರವಾಗಿ ಎರಡು ಕೋಮುಗಳ ನಡುವೆ ಭುಗಿಲೆದ್ದಿರುವ ವಿವಾದ ಸದ್ಯ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಸಾರ್ವಜನಿಕ ಶಾಂತಿ, ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಭಟ್ಕಳ ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಇಂದಿನಿಂದ (ಮೇ 25) ಮೇ 27ರ ಬೆಳಿಗ್ಗೆ 6:00 ಗಂಟೆಯವರೆಗೆ ಕಲಂ 144 ಸಿಆರ್‌ಪಿಸಿ/163 ಬಿಎನ್‌ಎಸ್‌ಎಸ್ ಅನ್ವಯ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಸಮೀಪವಿರುವ ಮುರಿನಕಟ್ಟೆಯಲ್ಲಿ ಹಲವು ವರ್ಷಗಳಿಂದ ಇದ್ದ ದೇವರಕಟ್ಟೆಯನ್ನು ಕೆಲವು ತಿಂಗಳುಗಳ ಹಿಂದೆ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿತ್ತು. ಆದರೆ, ಭಾನುವಾರ ಸ್ಥಳೀಯ ನಾಗರಿಕರು ಅದೇ ಜಾಗದ ಪಕ್ಕದಲ್ಲಿ ಪುನಃ ಮತ್ತೊಂದು ಹೊಸ ಕಟ್ಟೆಯನ್ನು ನಿರ್ಮಿಸಿದ್ದರು. ಇದಕ್ಕೆ ಮತ್ತೊಂದು ಕೋಮಿನ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕಟ್ಟೆಯನ್ನು ತಕ್ಷಣವೇ ತೆರವುಗೊಳಿಸುವಂತೆ ಒತ್ತಾಯಿಸಿ ಜಮಾಯಿಸಿದ್ದರಿಂದ ಸ್ಥಳದಲ್ಲಿ ದ್ವೇಷಮಯ ಹಾಗೂ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.
ಸ್ಥಳದಲ್ಲಿ ಜಮಾಯಿಸಿದ್ದ ಗುಂಪನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಅವರು ತುರ್ತು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದ್ಯ ಮುರಿನಕಟ್ಟೆ ಸುತ್ತಮುತ್ತ ಬಿಗು ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ನಿಷೇಧಾಜ್ಞೆ ಅವಧಿಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಆದೇಶ ಉಲ್ಲಂಘಿಸುವ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸುವುದಾಗಿ ಜಿಲ್ಲಾಡಳಿತ ಖಡಕ್ ಎಚ್ಚರಿಕೆ ನೀಡಿದೆ.
