ಭಟ್ಕಳ: ತಾಲೂಕಿನ ಸಮುದ್ರ ತೀರದಲ್ಲಿ ಚಿಪ್ಪು ಹೆಕ್ಕಲು ತೆರಳಿ ಒಂದೇ ಕುಟುಂಬದ ಎಂಟು ಮಂದಿ ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗಿ ಜಲಸಮಾಧಿಯಾಗಿರುವ ಭಾರಿ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.
ಘಟನೆಯಲ್ಲಿ 8 ಜನ ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಈ ದುರಂತದ ಬಗ್ಗೆ ಕಂಬನಿ ಮಿಡಿದಿರುವ ಸಿಎಂ, ರಾಜ್ಯ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ಪ್ರಕಟಿಸಿದ್ದಾರೆ.
ಮುಖ್ಯಮಂತ್ರಿಗಳ ಶೋಕ ಸಂದೇಶ
ಈ ಕುರಿತು ಟ್ವೀಟ್ (X) ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು,
“ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆ. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಇನ್ನೂ ಕೆಲವರು ಈ ದುರ್ಘಟನೆಯಲ್ಲಿ ಕಾಣೆಯಾಗಿರುವ ಮಾಹಿತಿಯಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಕಾಣೆಯಾದವರು ಬದುಕಿಬಂದು ತಮ್ಮವರನ್ನು ಕೂಡಿಕೊಳ್ಳಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ.” ಎಂದು ತಿಳಿಸಿದ್ದಾರೆ.
ದುರಂತದ ಸಂಪೂರ್ಣ ವಿವರ
ಮೃತಪಟ್ಟವರ ಮಾಹಿತಿ (ಒಟ್ಟು 08 ಜನ): ಭಟ್ಕಳ ಮತ್ತು ಮುರುಡೇಶ್ವರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾದ ಮೃತದೇಹಗಳ ವಿವರ ಇಂತಿದೆ:
- ಲಕ್ಷ್ಮಿ ಮಾದೇವ ನಾಯ್ಕ (38 ವರ್ಷ), ಪಡುಶಿರಾಲಿ, ಶಾರದಹೊಳೆ
- ಲಕ್ಷ್ಮಿ ಮಹಾದೇವ ನಾಯ್ಕ
- ಲಕ್ಷ್ಮಿ ಶಿವರಾಂ ನಾಯ್ಕ (39 ವರ್ಷ), ಪಡುಶಿರಾಲಿ, ಶಾರದಹೊಳೆ
- ಉಮೇಶ್ ಮಂಜುನಾಥ್ ನಾಯ್ಕ (42 ವರ್ಷ), ಪಡುಶಿರಾಲಿ, ಶಾರದಹೊಳೆ
- ಮಾಸ್ತಮ್ಮ ಮಂಜುನಾಥ್ ನಾಯ್ಕ (43 ವರ್ಷ), ಪಡುಶಿರಾಲಿ, ಶಾರದಹೊಳೆ
- ಲಕ್ಷ್ಮಿ ಅಣ್ಣಪ್ಪ ನಾಯ್ಕ (44 ವರ್ಷ), ಪಡುಶಿರಾಲಿ, ಶಾರದಹೊಳೆ
- ಜ್ಯೋತಿ ನಾಗಪ್ಪ ನಾಯ್ಕ (37 ವರ್ಷ), ಹಿರೆಹಿತ್ಲು, ಶಾರದಹೊಳೆ
- ಮಾಲತಿ ಜಟ್ಟಪ್ಪ ನಾಯ್ಕ (38 ವರ್ಷ), ಪಡುಶಿರಾಲಿ, ಶಾರದಹೊಳೆ
ನಾಪತ್ತೆಯಾದವರ ವಿವರ (ಒಟ್ಟು 03 ಜನ): ಕಾಣೆಯಾಗಿರುವ ಈ ಕೆಳಗಿನ ಮೂವರಿಗಾಗಿ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ:
- ಮಾದೇವ ಜಟ್ಟಪ್ಪ ನಾಯ್ಕ (52 ವರ್ಷ), ಪಡುಶಿರಾಲಿ, ಶಾರದಹೊಳೆ
- ಮಂಜಮ್ಮ ಗೊತ್ತಾ ನಾಯ್ಕ (50 ವರ್ಷ), ಪಡುಶಿರಾಲಿ, ಶಾರದಹೊಳೆ
- ನಾಗರತ್ನ ಪರಮೇಶ್ವರ್ ನಾಯ್ಕ (40 ವರ್ಷ), ಪಡುಶಿರಾಲಿ, ಶಾರದಹೊಳೆ
ಅಸ್ವಸ್ಥರಾದವರ ವಿವರ (ಒಟ್ಟು 02 ಜನ): ತೀವ್ರವಾಗಿ ಅಸ್ವಸ್ಥಗೊಂಡಿರುವ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
- ನಾಗರತ್ನ ಈಶ್ವರ ನಾಯ್ಕ
- ಮಾದೇವಿ ನಾಯ್ಕ
ದುರಂತ ಸ್ಥಳದಲ್ಲಿ ಕಂದಾಯ, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೀಡುಬಿಟ್ಟಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
