ಭಟ್ಕಳ: ತಾಲೂಕಿನ ಅಳಿವೆಕೋಡಿಯ ಪಳ್ಳಿಹೊಳೆಯಲ್ಲಿ ಭಾನುವಾರ ಸಂಭವಿಸಿದ ಭೀಕರ ಜಲದುರಂತದಲ್ಲಿ ನಾಪತ್ತೆಯಾಗಿದ್ದ ಕೊನೆಯ ವ್ಯಕ್ತಿಯ ಮೃತದೇಹ ಸೋಮವಾರ (ಇಂದು) ಬೆಳಿಗ್ಗೆ ಪತ್ತೆಯಾಗಿದೆ. ಇದರೊಂದಿಗೆ ಈ ಭೀಕರ ದುರಂತದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಸಮುದ್ರದ ಭರತಕ್ಕೆ ಸಿಲುಕಿ ನೀರು ಪಾಲಾಗಿದ್ದ 11 ಮಂದಿಯ ಪೈಕಿ ಹತ್ತು ಜನರ ಶವಗಳು ಭಾನುವಾರವೇ ಪತ್ತೆಯಾಗಿದ್ದವು. ಆದರೆ ಒಬ್ಬರ ಶವ ಪತ್ತೆಯಾಗಿರಲಿಲ್ಲ. ಇಂದು ಬೆಳಿಗ್ಗೆ ಪಡುಶಿರಾಲಿಯ ಮಾದೇವ ಬೈರಪ್ಪ ನಾಯ್ಕ (52 ವರ್ಷ) ಅವರ ಶವ ಪತ್ತೆಯಾಗುವ ಮೂಲಕ, ಜಲಸಮಾಧಿಯಾದ ಎಲ್ಲರ ಶವಗಳನ್ನು ಮೇಲಕ್ಕೆತ್ತಿದಂತಾಗಿದೆ.
ಜಲಸಮಾಧಿಯಾದ 11 ಮಂದಿಯ ವಿವರ
ಮಾದೇವ ಬೈರಪ್ಪ ನಾಯ್ಕ (52 ವರ್ಷ) – ಇಂದು ಶವ ಪತ್ತೆ, ಲಕ್ಷ್ಮಿ ಮಾದೇವ ನಾಯ್ಕ (38 ವರ್ಷ), ಲಕ್ಷ್ಮಿ ಮಹಾದೇವ ನಾಯ್ಕ, ಲಕ್ಷ್ಮಿ ಶಿವರಾಮ ನಾಯ್ಕ (39 ವರ್ಷ), ಉಮೇಶ ಮಂಜುನಾಥ ನಾಯ್ಕ (25 ವರ್ಷ), ಮಾಸ್ತಮ್ಮ ಮಂಜುನಾಥ ನಾಯ್ಕ (43 ವರ್ಷ), ಲಕ್ಷ್ಮಿ ಅಣ್ಣಪ್ಪ ನಾಯ್ಕ (44 ವರ್ಷ), ಮಾಲತಿ ಜಟ್ಟಪ್ಪ ನಾಯ್ಕ (38 ವರ್ಷ), ಮಂಜಮ್ಮ ಗೊಯ್ದಾ ನಾಯ್ಕ (50 ವರ್ಷ), ನಾಗರತ್ನ ಪರಮೇಶ್ವರ ನಾಯ್ಕ (40 ವರ್ಷ) ಹಾಗೂ ಜ್ಯೋತಿ ನಾಗಪ್ಪ ನಾಯ್ಕ (37 ವರ್ಷ, ಸಾ: ಹೀರೆಹಿತ್ಲು) ಮೃತ ದುರ್ದೈವಿಗಳಾಗಿದ್ದಾರೆ. ಮೃತಪಟ್ಟವರೆಲ್ಲರೂ ಭಟ್ಕಳ ತಾಲೂಕಿನ ಸಾರದಹೊಳೆಯ ಪಡುಶಿರಾಲಿ ಹಾಗೂ ಹಿರೆಹಿತ್ಲು ಗ್ರಾಮಗಳಿಗೆ ಸೇರಿದವರಾಗಿದ್ದಾರೆ.
ಪ್ರಾಣಾಪಾಯದಿಂದ ಪಾರಾಗಿರುವ ಮೂವರು
ನೀರಿನಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥರಾಗಿದ್ದ ನಾಗರತ್ನ ಈಶ್ವರ ನಾಯ್ಕ, ಮಾದೇವಿ ನಾಯ್ಕ ಹಾಗೂ ಲಲಿತಾ ಜಗದೀಶ ನಾಯ್ಕರನ್ನು ರಕ್ಷಿಸಿ ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಈ ಮೂವರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಾಚರಣೆ ನಡೆಸಿದ ತಂಡಗಳು
ಭಾನುವಾರ ಘಟನೆ ನಡೆದ ತಕ್ಷಣವೇ ಪೊಲೀಸ್ ಇಲಾಖೆ, ಎನ್ಡಿಆರ್ಎಫ್ (NDRF), ಕರಾವಳಿ ಭದ್ರತಾ ಪಡೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ನಿರಂತರ ಶೋಧ ಕಾರ್ಯ ಕೈಗೊಂಡಿದ್ದರು.ಭಾನುವಾರ ರಾತ್ರಿ ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞ ಈಶ್ವರ ಮಲ್ಪೆ ಅವರ ತಂಡವು, ಕತ್ತಲಲ್ಲೂ ಲೆಕ್ಕಿಸದೆ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿತ್ತು. ಸತತ ಶ್ರಮದ ಫಲವಾಗಿ ಸೋಮವಾರ ಬೆಳಿಗ್ಗೆ ಕೊನೆಯ ಶವವನ್ನು ಮೇಲಕ್ಕೆತ್ತುವಲ್ಲಿ ತಂಡ ಯಶಸ್ವಿಯಾಗಿದೆ. ಒಂದೇ ಗ್ರಾಮದ 11 ಮಂದಿ ಸಾವಿಗೀಡಾಗಿರುವುದು ಇಡೀ ಜಿಲ್ಲೆಯನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.
