Spread the love

ಭಟ್ಕಳ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯನವರು ಅಧಿಕೃತವಾಗಿ ರಾಜೀನಾಮೆ ನೀಡಿರುವ ಬೆನ್ನಲ್ಲೇ, ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ರಾಜ್ಯದ ಎಲ್ಲಾ 136 ಶಾಸಕರು ಕಟ್ಟುನಿಟ್ಟಾಗಿ ಬದ್ಧರಾಗಿರುತ್ತಾರೆ ಎಂದು ಮೀನುಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸ್ಪಷ್ಟಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಹಾಗೂ ನೂತನ ಸಿಎಂ ಆಯ್ಕೆ ಪ್ರಕ್ರಿಯೆಯ ಕುರಿತು ಮಹತ್ವದ ಪ್ರತಿಕ್ರಿಯೆ ನೀಡಿದರು.

ಹೈಕಮಾಂಡ್ ನಿರ್ಧಾರವೇ ಅಂತಿಮ:

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆ ಚುರುಕುಗೊಂಡಿರುವ ಬೆನ್ನಲ್ಲೇ ಸಚಿವರು ಹೈಕಮಾಂಡ್ ವರಿಷ್ಠರ ನಿರ್ಧಾರದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

“ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಹಾಗೂ ಜನರಿಗೆ ಒಳಿತನ್ನು ಮಾಡುವ ಅತ್ಯಂತ ಸೂಕ್ತ ವ್ಯಕ್ತಿಯನ್ನೇ ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಿದೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ. ಈಗಾಗಲೇ ದೆಹಲಿಗೆ ಪಕ್ಷದ ಹಿರಿಯ ಸಚಿವರು ಹಾಗೂ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ತೆರಳಿದ್ದಾರೆ. ಅವರ ಸಮ್ಮುಖದಲ್ಲಿ ವರಿಷ್ಠರು ಕೈಗೊಳ್ಳುವ ಅಂತಿಮ ತೀರ್ಮಾನಕ್ಕೆ ನಮ್ಮ ಪಕ್ಷದ ಎಲ್ಲಾ 136 ಶಾಸಕರೂ ತಲೆಬಾಗಲಿದ್ದೇವೆ. ಇದರಲ್ಲಿ ನಮ್ಮೊಳಗೆ ಯಾವುದೇ ಗೊಂದಲವಿಲ್ಲ” ಎಂದು ಅವರು ತಿಳಿಸಿದರು.

ಶೀಘ್ರದಲ್ಲೇ ಸಿಎಲ್‌ಪಿ ಸಭೆ:

ರಾಜ್ಯದ ಮುಂದಿನ ಚುಕ್ಕಾಣಿ ಹಿಡಿಯುವ ನಾಯಕನ ಆಯ್ಕೆಗಾಗಿ ನಾಳೆ ಅಥವಾ ನಾಡಿದ್ದು (ಶನಿವಾರ ಅಥವಾ ಭಾನುವಾರ) ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ಕರೆಯುವ ಸಾಧ್ಯತೆಯಿದೆ. ಆ ಸಭೆಯಲ್ಲಿ ನಾವೆಲ್ಲಾ ಶಾಸಕರು ಖುದ್ದಾಗಿ ಪಾಲ್ಗೊಂಡು, ಹೈಕಮಾಂಡ್ ಪ್ರಕಟಿಸುವ ನಿರ್ಧಾರವನ್ನು ಒಮ್ಮತದಿಂದ ಸ್ವಾಗತಿಸಿ ಒಪ್ಪಿಕೊಳ್ಳುತ್ತೇವೆ ಎಂದು ಸಚಿವರು ವಿವರಿಸಿದರು.

‘ನನಗೆ ದೆಹಲಿಗಿಂತ, ಕ್ಷೇತ್ರದ ಜನರ ಕೆಲಸವೇ ಮುಖ್ಯ’:

ದೆಹಲಿ ಮಟ್ಟದ ರಾಜಕಾರಣ ಅಥವಾ ಮುಂದಿನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಕುರಿತಾದ ಲಾಬಿಗಳ ಪ್ರಶ್ನೆಗೆ ಉತ್ತರಿಸಿದ ಮಂಕಾಳ ವೈದ್ಯ, ತಾವು ಸದಾ ಕ್ಷೇತ್ರದ ಜನರೊಂದಿಗೆ ಇರಬಯಸುವುದಾಗಿ ಸ್ಪಷ್ಟಪಡಿಸಿದರು.

“ನಾನು ಇಂದು ಸಚಿವನಾಗಲು ನನ್ನ ಭಟ್ಕಳ-ಹೊನ್ನಾವರ ಕ್ಷೇತ್ರದ ಜನರೇ ಮೂಲ ಕಾರಣ. ಅವರು ನನ್ನನ್ನು ಆಶೀರ್ವದಿಸಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಕ್ಕೇ ನನಗೆ ಮಂತ್ರಿಯಾಗುವಂತಹ ದೊಡ್ಡ ಅವಕಾಶ ಸಿಕ್ಕಿದೆ. ಹೀಗಾಗಿ, ನನಗೆ ದೆಹಲಿ ರಾಜಕಾರಣಕ್ಕಿಂತ ನನ್ನ ಕ್ಷೇತ್ರದ ಜನರ ಕೆಲಸ ಮಾಡುವುದು ಅತ್ಯಂತ ಮುಖ್ಯವಾಗಿದೆ. ನಾನು ಸದ್ಯ ಲಾಬಿಗಾಗಿ ಬೇರೆಲ್ಲೂ ಹೋಗುವುದಿಲ್ಲ. ನನ್ನ ಕ್ಷೇತ್ರದಲ್ಲೇ ಲಭ್ಯವಿದ್ದು ಜನರ ಸೇವೆ ಮುಂದುವರಿಸುತ್ತೇನೆ” ಎಂದು ಮಂಕಾಳ ವೈದ್ಯ ಭಾವುಕರಾಗಿ ನುಡಿದರು.

Leave a Reply

Your email address will not be published. Required fields are marked *