ಭಟ್ಕಳ: ತಾಲೂಕಿನಲ್ಲಿ ಮುರಿನಕಟ್ಟೆ ಧ್ವಂಸ ಮಾಡಿದ್ದನ್ನು ಖಂಡಿಸಿ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಭಟ್ಕಳ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೆಟ್ಟ ಉದ್ದೇಶದಿಂದ ಯಾವ ಜಾಗದಲ್ಲಿ ಮುರಿನಕಟ್ಟೆಯನ್ನು ಕೆಡವಿ ಹಾಕಲಾಗಿದೆಯೋ, ಅದೇ ಜಾಗದಲ್ಲಿ ನಾವು ಮರಳಿ ಕಟ್ಟೆಯನ್ನು ಕಟ್ಟೇ ತೀರುತ್ತೇವೆ,” ಎಂದು ಸಂಸದ ಕಾಗೇರಿ ಬಹಿರಂಗ ಸವಾಲು ಹಾಕಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ ಅವರು ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ ಎಂದ ಕಾಗೇರಿ, “ನಮ್ಮ ಈ ಹೋರಾಟದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ, ನಾವೆಲ್ಲರೂ ಒಟ್ಟಾಗಿ ಮುನ್ನಡೆಯುತ್ತೇವೆ. ಮುಂದಿನ ಅಧಿವೇಶನದವರೆಗೂ ಕಾಯುವ ಅಗತ್ಯವಿಲ್ಲ, ಕೂಡಲೇ ಅದೇ ಜಾಗದಲ್ಲಿ ಕಟ್ಟೆ ನಿರ್ಮಾಣವಾಗಬೇಕು,” ಎಂದು ಸರ್ಕಾರವನ್ನು ಕಟ್ಟುನಿಟ್ಟಾಗಿ ಆಗ್ರಹಿಸಿದರು.
ಪೊಲೀಸ್ ಇಲಾಖೆಯ ತಾರತಮ್ಯದ ನೀತಿಗೆ ಖಂಡನೆ
ಪ್ರತಿಭಟನಾ ಸಭೆಯಲ್ಲಿ ಪೊಲೀಸ್ ಇಲಾಖೆಯ ನಡೆ ಹಾಗೂ ತಾರತಮ್ಯದ ನೀತಿಯನ್ನು ಕಾಗೇರಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. “ಕೇವಲ ವಾಟ್ಸ್ಆ್ಯಪ್ ಸಂದೇಶವನ್ನು ಫಾರ್ವರ್ಡ್ ಮಾಡಿದ ಹಿಂದೂಗಳನ್ನು ತಕ್ಷಣವೇ ಹಿಡಿದುಕೊಂಡು ಹೋಗುವ ಪೊಲೀಸರು, ಇಡೀ ಕಟ್ಟೆಯನ್ನು ಧ್ವಂಸ ಮಾಡಿ, ರಕ್ಷಣೆಗೆ ನಿಂತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಸಾವಿರಾರು ಜನರ ಪೈಕಿ ಕೇವಲ ಆರು ಜನರನ್ನು ಮಾತ್ರ ಬಂಧಿಸಿರುವುದು ಯಾವ ನ್ಯಾಯ?” ಎಂದು ಖಾರವಾಗಿ ಪ್ರಶ್ನಿಸಿದರು. ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ತಕ್ಷಣವೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಹಿಂದೂ ಮುಖಂಡರಾದ ಸುನಿಲ್ ನಾಯ್ಕ, ಗೋವಿಂದ್ ನಾಯ್ಕ ಸೇರಿದಂತೆ 15ಕ್ಕೂ ಹೆಚ್ಚು ಪ್ರಮುಖರು ಶಾಂತವಾಗಿದ್ದರೂ, ಅವರ ಮೇಲೆ ರಾಜಕೀಯ ಒತ್ತಡದಿಂದಾಗಿ ಅನಗತ್ಯವಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆಪಾದಿಸಿದರು.
ರಾಜಕೀಯ ಒತ್ತಡಕ್ಕೆ ಮಣಿಯದಂತೆ ಎಚ್ಚರಿಕೆ
ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಇತರ ಪ್ರಭಾವಿ ನಾಯಕರ ದೂರವಾಣಿ ಕರೆಗಳ ಒತ್ತಡಕ್ಕೆ ಮಣಿದು ಪೊಲೀಸರು ಇಂತಹ ಏಕಪಕ್ಷೀಯ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದ ಸಂಸದರು, ಪೊಲೀಸ್ ಇಲಾಖೆಯು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ಕಾನೂನು ಕ್ರಮ ಜರುಗಿಸಬೇಕು ಮತ್ತು ನೈಜ ನ್ಯಾಯವನ್ನು ಒದಗಿಸಬೇಕು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಈ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್.ಎಸ್. ಹೆಗಡೆ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನಿಲ್ ಹೆಗಡೆ ಸೇರಿದಂತೆ ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
