Spread the love

ಕಾರವಾರ: ಕಳೆದ 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯೊಬ್ಬನನ್ನು ಕಾರವಾರ ಶಹರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಖಚಿತ ಮಾಹಿತಿ ಹಾಗೂ ತಾಂತ್ರಿಕ ಆಧಾರದ ಮೇಲೆ ಬಂಧಿಸಿ ಕಾರವಾರದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಬಂಧಿತ ಆರೋಪಿಯನ್ನು ಶಿರಸಿಯ ನೆಹರು ನಗರದ ಕೋಟೆ ಕೆರೆ ಸಮೀಪದ ನಿವಾಸಿ ನಿಯಾಜ್ ಅಲಿಯಾಸ್ ಮೋಟು ದಸ್ತಗಿರ್ ಶೇಖ್ ಎಂದು ಗುರುತಿಸಲಾಗಿದೆ. ಈತನ ಮೇಲೆ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ 115/2018 ಕ್ರಮಾಂಕದಡಿ ಐಪಿಸಿ ಕಲಂ 379, 411, 201 ಹಾಗೂ 34 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕಾರವಾರದ ಮಾನ್ಯ ಸಿವಿಲ್ ಜಡ್ಜ್ ಮತ್ತು ಸಿಜೆಎಮ್ ನ್ಯಾಯಾಲಯದಲ್ಲಿ ಸಿಸಿ ನಂಬರ್ 159/2023 ಹಾಗೂ ಎಲ್‌ಪಿಸಿ ನಂಬರ್ 43/2024 ವಿಚಾರಣೆ ಹಂತದಲ್ಲಿತ್ತು. 

ಆದರೆ, ಆರೋಪಿಯು ಕಳೆದ 2 ವರ್ಷಗಳಿಂದ ನ್ಯಾಯಾಲಯದ ಪ್ರಕ್ರಿಯೆಗಳಿಗೆ ಹಾಜರಾಗದೆ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದನು. ಈತನ ವಿರುದ್ಧ ಕೇವಲ ಕಾರವಾರ ಮಾತ್ರವಲ್ಲದೆ, ಜಿಲ್ಲೆ ಹಾಗೂ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ವಾರೆಂಟ್ ಜಾರಿಯಾಗಿದ್ದ ಈ ಆರೋಪಿಯ ಪತ್ತೆಗಾಗಿ ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿದ್ದರು. ತಾಂತ್ರಿಕ ವಿಭಾಗದ ನೆರವು ಹಾಗೂ ಖಚಿತ ಮಾಹಿತಿಯ ಆಧಾರದ ಮೇಲೆ ನಿಖರ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡವು, ಮೇ 31, 2026 ರಂದು ಶಿವಮೊಗ್ಗದ ಸಾಗರದಲ್ಲಿ ಆತನನ್ನು ವಶಕ್ಕೆ ಪಡೆದಿದೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. 

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕಾರವಾರ ಶಹರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಹಸನ್ ಕುಟ್ಟಿ, ಸಚಿನ್ ನಾಯ್ಕ, ಮಾದೇವ್ ಸಂಗಾಪುರ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಎ.ಆರ್.ಎಸ್.ಐ ಬಬನ್ ಕದಂ ಮತ್ತು ಉದಯ ವಿ. ಗುನಗಾ ಅವರು ಪಾಲ್ಗೊಂಡಿದ್ದರು. ಬಹುಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಶ್ರಮಿಸಿದ ಕಾರವಾರ ಶಹರ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಹಿರಿಯ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *