Spread the love

ಯಲ್ಲಾಪುರ: ರೋಗಿಯೊಬ್ಬರಿಗೆ ಚಿಕಿತ್ಸೆ ಕೊಡಿಸಲು ಯಾದಗಿರಿಯಿಂದ ಕಾರವಾರಕ್ಕೆ ಹೊರಟಿದ್ದ ಕಾರು ರಸ್ತೆ ಅಪಘಾತಕ್ಕೀಡಾಗಿ, ತೀವ್ರವಾಗಿ ಗಾಯಗೊಂಡಿದ್ದ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ. ಯಲ್ಲಾಪುರ ತಾಲೂಕಿನ ಹೊಸಳ್ಳಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಮೇ 18 ರಂದು ಈ ಭೀಕರ ಅಪಘಾತ ಸಂಭವಿಸಿದ್ದು, ಇದೀಗ ಗಾಯಾಳು ಮೃತಪಟ್ಟ ಹಿನ್ನೆಲೆಯಲ್ಲಿ ಕಾರು ಚಾಲಕನ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಸೆಕ್ಷನ್ ಸೇರ್ಪಡೆಗೊಳಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಅಣಬಿ ಗ್ರಾಮದ 25 ವರ್ಷದ ವಿಶ್ವನಾಥ ಹಡಪದ ಎಂಬುವವರು ತಮ್ಮ ದೊಡ್ಡಪ್ಪ ಗುರಣ್ಣ ಅವರಿಗೆ ಪಾರ್ಶ್ವವಾಯು ತಗುಲಿದ್ದ ಕಾರಣ ಚಿಕಿತ್ಸೆಗಾಗಿ ಸಂಬಂಧಿಕರೊಂದಿಗೆ ಎರ್ಟಿಗಾ ಕಾರಿನಲ್ಲಿ (KA 36 P 9755) ಕಾರವಾರದ ಹಳಗಾ ಗ್ರಾಮದಲ್ಲಿರುವ ಪಾರ್ಶ್ವವಾಯು ಚಿಕಿತ್ಸಾ ಕೇಂದ್ರಕ್ಕೆ ಹೊರಟಿದ್ದರು. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ 29 ವರ್ಷದ ಗೌಡಪ್ಪಗೌಡ ಎಂಬಾತ ಕಾರು ಚಲಾಯಿಸುತ್ತಿದ್ದನು. ಮೇ 18 ರ ಮುಂಜಾನೆ 03:15 ರ ಸುಮಾರಿಗೆ ಯಲ್ಲಾಪುರದ ಹೊಸಳ್ಳಿ ಕ್ರಾಸ್ ಬಳಿ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ, ಕಾರು ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಟ್ಯಾಂಕರ್ ಲಾರಿಗೆ (TN 28 AA 2337) ಹಿಂಬದಿಯಿಂದ ಅಪ್ಪಳಿಸಿದೆ.

ಈ ದುರಂತದಲ್ಲಿ ಕಾರಿನಲ್ಲಿದ್ದ ಶಹಾಪುರ ತಾಲೂಕಿನ ಹೊಸೂರು ಗ್ರಾಮದ 62 ವರ್ಷದ ರಾಮಪ್ಪ ಅವರ ಬೆನ್ನು ಮತ್ತು ಕುತ್ತಿಗೆಯ ಭಾಗಕ್ಕೆ ಗಂಭೀರವಾದ ಒಳಪೆಟ್ಟಾಗಿತ್ತು. ಹಾಗೆಯೇ ಜೊತೆಯಲ್ಲಿದ್ದ ಮನೋಜ್‌ಕುಮಾರ್ ಎಂಬುವವರ ತಲೆಗೂ ಗಾಯವಾಗಿತ್ತು. ತಕ್ಷಣವೇ ಗಾಯಾಳು ರಾಮಪ್ಪ ಅವರನ್ನು ಯಲ್ಲಾಪುರದ ಕಿರವತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತದನಂತರ ಅಲ್ಲಿಂದ ಶಹಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಸುಮಾರು ಎರಡು ವಾರಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ರಾಮಪ್ಪ ಅವರು ಮೇ 31 ರಂದು ಮುಂಜಾನೆ 04:36 ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಆರಂಭದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ವಿಶ್ವನಾಥ ಅವರು ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸರು ಕಾರು ಚಾಲಕ ಗೌಡಪ್ಪಗೌಡ ವಿರುದ್ಧ ಕಲಂ 281, 125(A), ಹಾಗೂ 125(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಗಾಯಾಳು ರಾಮಪ್ಪ ಮೃತಪಟ್ಟಿರುವ ಬಗ್ಗೆ ಶಹಾಪುರ ಆಸ್ಪತ್ರೆಯಿಂದ ಅಧಿಕೃತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಅಪಘಾತಕ್ಕೆ ಕಾರಣನಾದ ಕಾರು ಚಾಲಕನ ವಿರುದ್ಧ ಹೆಚ್ಚುವರಿಯಾಗಿ ಕಲಂ 106(1) ಅನ್ನು ಸೇರ್ಪಡೆ ಮಾಡಿಕೊಂಡು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *