Spread the love

ಕಾರವಾರ: ತಾಲೂಕಿನ ಕಡವಾಡ ಗ್ರಾಮದಲ್ಲಿ ಗುರುವಾರ ಹುತಾತ್ಮ ವೀರಯೋಧ ವಿನೋದ ಮಹಾದೇವ ನಾಯ್ಕ ಅವರ ಪುಣ್ಯತಿಥಿ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಅವರು ಭಾಗವಹಿಸಿ, ವೀರಯೋಧನ ಸ್ಮಾರಕದ ನೂತನ ಆವರಣ ಗೋಡೆ ಹಾಗೂ ಉದ್ಯಾನವನವನ್ನು ಉದ್ಘಾಟಿಸಿ ಗೌರವ ನಮನ ಸಲ್ಲಿಸಿದರು.

ಸ್ಮಾರಕ ಉದ್ಘಾಟಿಸಿ ಮಾತನಾಡಿದ ರೂಪಾಲಿ ಎಸ್. ನಾಯ್ಕ ಅವರು, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಹುತಾತ್ಮ ವಿನೋದ ನಾಯ್ಕ ಅವರಂತಹ ವೀರ ಪುತ್ರನನ್ನು ಪಡೆದ ತಂದೆ-ತಾಯಿ ನಿಜಕ್ಕೂ ಧನ್ಯರು ಎಂದು ಬಣ್ಣಿಸಿದರು. ವಿನೋದ ನಾಯ್ಕ ಕೇವಲ ಒಂದು ಕುಟುಂಬ ಅಥವಾ ಗ್ರಾಮದ ಹೆಮ್ಮೆಯಲ್ಲ, ಬದಲಾಗಿ ಇಡೀ ದೇಶದ ಹೆಮ್ಮೆಯಾಗಿದ್ದಾರೆ. ಗ್ರಾಮದ ಜನರೆಲ್ಲರೂ ಒಗ್ಗೂಡಿ ಅವರ ಪುಣ್ಯತಿಥಿಯನ್ನು ಆಚರಿಸುತ್ತಿರುವುದು ಅವರು ದೇಶಕ್ಕಾಗಿ ಮಾಡಿದ ಬಲಿದಾನದ ಮಹತ್ವವನ್ನು ಸಾರುತ್ತದೆ ಎಂದು ಹೇಳಿದರು.

ದೇಶಕ್ಕಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ವೀರಯೋಧರು ಎಂದಿಗೂ ಅಜರಾಮರರಾಗಿರುತ್ತಾರೆ. ಗಡಿಯಲ್ಲಿ ಕಾವಲು ಕಾಯುವ ಯೋಧರ ನಿಸ್ವಾರ್ಥ ದೇಶಸೇವೆಯಿಂದಾಗಿ ನಾವೆಲ್ಲರೂ ಸುರಕ್ಷಿತವಾಗಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದು ಅವರು ಯೋಧರ ಸೇವೆಯನ್ನು ಸ್ಮರಿಸಿದರು.

ಕಾರ್ಯಕ್ರಮದ ಅಂಗವಾಗಿ ರೂಪಾಲಿ ನಾಯ್ಕ ಅವರು ವಿನೋದ ನಾಯ್ಕ ಅವರ ಕುಟುಂಬಸ್ಥರನ್ನು ಭೇಟಿಯಾಗಿ ಅವರ ಯೋಗಕ್ಷೇಮ ವಿಚಾರಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ಸ್ಮಾರಕದ ಆವರಣದಲ್ಲಿ ಪರಿಸರ ಪ್ರೇಮದ ಸಂಕೇತವಾಗಿ ತೆಂಗಿನ ಸಸಿಯನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ಕಡವಾಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದು ನಾಯ್ಕ, ಮಾಜಿ ಸದಸ್ಯ ಕಿಶೋರ್ ಕಡವಾಡಕರ, ವಿನೋದ ನಾಯ್ಕ ಅವರ ತಂದೆ ಮಹಾದೇವ ನಾಯ್ಕ, ಹಲವು ಮಾಜಿ ಸೈನಿಕರು ಹಾಗೂ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *