Spread the love

ಕಾರವಾರ: ನಗರದ ಬಸ್ ನಿಲ್ದಾಣದ ಸಮೀಪ ಬುಧವಾರ ಬೆಳಗ್ಗೆ ಸಾರಿಗೆ ಬಸ್ ಹಾಗೂ ಟಾಟಾ ಅಲ್ಟ್ರೋಜ್ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ಕಾರಿನ ಸವಾರರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, KA-31-F-1253 ನೋಂದಣಿ ಸಂಖ್ಯೆಯ ಕಾರವಾರ–ಕಡವಾಡ–ಕಾರವಾರ ಮಾರ್ಗದ ಸಾರಿಗೆ ಬಸ್ ಬಸ್ ನಿಲ್ದಾಣದತ್ತ ತೆರಳುತ್ತಿತ್ತು. ಇದೇ ವೇಳೆ GA-04-E-7916 ನೋಂದಣಿ ಸಂಖ್ಯೆಯ ಟಾಟಾ ಅಲ್ಟ್ರೋಜ್ ಕಾರು ಅದೇ ಮಾರ್ಗದಲ್ಲಿ ಸಂಚರಿಸುತ್ತಿತ್ತು.

ಕಾರಿನ ಚಾಲಕ ಯು-ಟರ್ನ್ ಪಡೆಯಲು ಬ್ರೇಕ್ ಹಾಕಿದ ಸಂದರ್ಭದಲ್ಲಿ, ಹಿಂಬದಿಯಿಂದ ಬರುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಹಿಂಬದಿಯ ಗಾಜು ಸಂಪೂರ್ಣವಾಗಿ ಪುಡಿಪುಡಿಯಾಗಿದ್ದು, ವಾಹನದ ಹಿಂಭಾಗಕ್ಕೆ ಹಾನಿಯಾಗಿದೆ.

ಅಪಘಾತದ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ಕಾರಿನಲ್ಲಿದ್ದವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಹೀಗಾಗಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಘಟನೆಯ ಮಾಹಿತಿ ತಿಳಿದು ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಬಸ್ ಚಾಲಕ ನಾಪತ್ತೆಯಾಗಿದ್ದ ಎನ್ನಲಾಗಿದ್ದು, ಕಾರಿನಲ್ಲಿದ್ದ ಸವಾರರು ಚಾಲಕನನ್ನ ಕರೆತರುವವರೆಗೂ ಕಾರು ತೆಗೆಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಸಂಚಾರ ಪೊಲೀಸರು ಕಾರಿನ ಸವಾರರ ಮನವೊಲಿಸಿ ಕಾರನ್ನು ಪೊಲೀಸ್ ಠಾಣೆ ಬಳಿ ತಂದು ದೂರು ನೀಡುವಂತೆ ತಿಳಿಸಿದ್ದು, ಬಳಿಕ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂಬಂಧ ಸದ್ಯ ಪ್ರಕರಣ ದಾಖಲಾಗಬೇಕಿದೆ.

Leave a Reply

Your email address will not be published. Required fields are marked *