Spread the love

ಕಾರವಾರ: ತಾಲೂಕಿನಾದ್ಯಂತ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಸರಣಿ ಕಳ್ಳತನ ಮಾಡುತ್ತಿರುವ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬಂದಿವೆ. ಕಾರವಾರ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮೂರು ಪ್ರತ್ಯೇಕ ದೇವಸ್ಥಾನಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಹಿತ್ತಾಳೆ ಗಂಟೆಗಳು, ದೀಪಗಳು ಹಾಗೂ ತಾಮ್ರದ ವಸ್ತುಗಳನ್ನು ಖದೀಮರು ಕಳವು ಮಾಡಿರುವ ಘಟನೆಗಳು ವರದಿಯಾಗಿವೆ.

ಹಬ್ಬುವಾಡದ ದಾಸಮಾರುತಿ ದೇವಸ್ಥಾನದಲ್ಲಿ 50 ಕೆ.ಜಿ ವಸ್ತುಗಳ ಕಳವು 

ಕಾರವಾರ ನಗರದ ಹಬ್ಬುವಾಡ ರಸ್ತೆಯಲ್ಲಿರುವ ದಾಸಮಾರುತಿ ದೇವಸ್ಥಾನದಲ್ಲಿ ಮೇ 20 ರಂದು ಬೆಳಿಗ್ಗೆ 8:30 ರಿಂದ ಸಂಜೆ 5:30 ರ ನಡುವಿನ ಹಗಲು ಹೊತ್ತಿನಲ್ಲೇ ಕಳ್ಳತನ ನಡೆದಿದೆ. ದೇವಸ್ಥಾನದಲ್ಲಿ ಇಟ್ಟಿದ್ದ ಅಂದಾಜು 30,000 ರೂ. ಮೌಲ್ಯದ ಸುಮಾರು 50 ಕೆ.ಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ವಸ್ತುಗಳನ್ನು ಯಾರೋ ಕಳ್ಳರು ದೋಚಿದ್ದಾರೆ. ದೇವಸ್ಥಾನ ಕಮಿಟಿಯವರೊಂದಿಗೆ ಚರ್ಚಿಸಿ ಹುಡುಕಾಟ ನಡೆಸಿದ ಬಳಿಕ, ಗ್ರೀನ್‌ಸ್ಟ್ರೀಟ್ ರಸ್ತೆಯ ನಿವಾಸಿ ಶಾಮಸುಂದರ ಅನಂತ ಬಸರೂರ (67) ಅವರು ಕಾರವಾರ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕಲಂ: 305 ಡಿ ಅಡಿ ಪ್ರಕರಣ ದಾಖಲಾಗಿದೆ.

ಚೆಂಡಿಯಾದ ಜಯ ಮಾರುತಿ ದೇವಸ್ಥಾನದಲ್ಲಿ ಗಂಟೆಗಳ ಕಳ್ಳತನ 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಚೆಂಡಿಯಾ ಗ್ರಾಮದ ಶ್ರೀ ಜಯ ಮಾರುತಿ ದೇವಸ್ಥಾನದಲ್ಲಿ ಮೇ 31 ರಂದು ಕಳ್ಳತನ ಸಂಭವಿಸಿದೆ. ಬೆಳಿಗ್ಗೆ 8:00 ರಿಂದ ಸಂಜೆ 5:30 ರ ನಡುವೆ ಬಾಗಿಲು ತೆರೆದಿದ್ದಾಗ ದೇವಸ್ಥಾನದ ಒಳನುಗ್ಗಿದ ಕಳ್ಳರು, ಸುಮಾರು 21,000 ರೂ. ಮೌಲ್ಯದ ಎರಡು ಬೆಲೆಬಾಳುವ ಹಿತ್ತಾಳೆಯ ಗಂಟೆಗಳನ್ನು ಕಳವು ಮಾಡಿದ್ದಾರೆ. ಎಲ್ಲೆಡೆ ಹುಡುಕಾಡಿದರೂ ಗಂಟೆಗಳು ಪತ್ತೆಯಾಗದ ಕಾರಣ ಕಮಿಟಿಯವರೊಂದಿಗೆ ಚರ್ಚಿಸಿ, ಚೆಂಡಿಯಾದ ನಿವಾಸಿ ನರಸಿಂಹ ಸುಬ್ರಾಯ ಆಚಾರಿ (75) ದೂರು ದಾಖಲಿಸಿದ್ದಾರೆ.

ಮಖೇರಿ ರಾಮಸತಿ ದೇವಿ ದೇವಸ್ಥಾನದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳ ಕಳವು 

ಜೂನ್ 4 ರಂದು ಮಖೇರಿ, ಸಾಸನವಾಡದಲ್ಲಿರುವ ಶ್ರೀ ರಾಮಸತಿ ದೇವಿ ದೇವಸ್ಥಾನದಲ್ಲಿ ಕೂಡ ಕಳ್ಳತನ ನಡೆದಿದೆ. ಬೆಳಿಗ್ಗೆ 7:30 ರಿಂದ ಸಂಜೆ 5:00 ಗಂಟೆಯ ನಡುವೆ ಬಾಗಿಲು ತೆರೆದಿದ್ದಾಗ ದೇವಸ್ಥಾನದೊಳಗೆ ನುಗ್ಗಿದ ಖದೀಮರು, ಒಟ್ಟು 24,000 ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಇದರಲ್ಲಿ 15,000 ರೂ. ಮೌಲ್ಯದ ದೊಡ್ಡ ಹಿತ್ತಾಳೆ ದೀಪ, 5,000 ರೂ. ಮೌಲ್ಯದ ಸಣ್ಣ ಸಮಯ್ ಹಾಗೂ 4,000 ರೂ. ಮೌಲ್ಯದ ಹಿತ್ತಾಳೆಯ ಗಂಟೆ ಸೇರಿವೆ. ಈ ಸಂಬಂಧ ವಿಘ್ನೇಶ್ವರ ರತ್ನಾಕರ ನಾಗೇಕರ (40) ಎಂಬುವವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೂರು ಪ್ರಕರಣಗಳಲ್ಲೂ ಕಳ್ಳತನವಾದ ಬಗ್ಗೆ ಆಯಾ ದೇವಸ್ಥಾನ ಸಮಿತಿಯವರು ಸ್ಥಳೀಯವಾಗಿ ವಿಚಾರಿಸಿ, ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ತಡವಾಗಿ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ. ಕಾರವಾರ ಶಹರ ಮತ್ತು ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಳ್ಳರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

Leave a Reply

Your email address will not be published. Required fields are marked *