ಶಿರಸಿ: ಕೆಪಿಎಸ್‌ಸಿ (KPSC) ನೇಮಕಾತಿ ಹಗರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಜೊತೆಗೆ ಶಿರಸಿ ಉಪವಿಭಾಗದ ಡಿವೈಎಸ್‌ಪಿ (DySP) ಗೀತಾ ಪಾಟೀಲ್ ಸೇರಿದಂತೆ ಬರೋಬ್ಬರಿ 9 ಜನ ಡಿವೈಎಸ್‌ಪಿ ಹಂತದ ಅಧಿಕಾರಿಗಳು ನಿಂತು ಫೋಟೋಗೆ ಪೋಸ್ ನೀಡಿರುವ ಚಿತ್ರವೊಂದು ಇದೀಗ ಭಾರೀ ವೈರಲ್ ಆಗಿದ್ದು, ರಾಜ್ಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಹಗರಣದ ರೂವಾರಿಯೊಂದಿಗೆ ಉನ್ನತ ಪೊಲೀಸ್ ಅಧಿಕಾರಿಗಳು ಕಾಣಿಸಿಕೊಂಡಿರುವುದು ತೀವ್ರ ವಿವಾದ ಸೃಷ್ಟಿಸಿದೆ.
ಮೈಸೂರು ಪೊಲೀಸ್ ಅಕಾಡೆಮಿಯಲ್ಲಿ ಪ್ರತ್ಯಕ್ಷವಾಗಿದ್ದ ಕನ್ನಾಳೆ
ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ 2023-24ನೇ ಸಾಲಿನಲ್ಲಿ ನಡೆದಿದ್ದ ಅಧಿಕಾರಿಗಳ ಪಾಸಿಂಗ್ ಔಟ್ (Passing out parade) ಪರೇಡ್‌ನಲ್ಲಿ ಈ ಆರೋಪಿ ಬಸವರಾಜ್ ಕನ್ನಾಳೆ ಪ್ರತ್ಯಕ್ಷನಾಗಿದ್ದ. ಸಮವಸ್ತ್ರಧಾರಿ ಪೊಲೀಸ್ ಅಧಿಕಾರಿಗಳ ಮಧ್ಯೆ ನಿಂತು ರಾಜಾರೋಷವಾಗಿ ಆತ ಫೋಟೋ ತೆಗೆಸಿಕೊಂಡಿದ್ದಾನೆ.
ವೈರಲ್ ಆಗಿರುವ ಈ ಫೋಟೋದಲ್ಲಿ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಎಕ್ಸೈಸ್ (ಅಬಕಾರಿ) ಹರ್ಷ ಹಾಗೂ ಡಿವೈಎಸ್‌ಪಿಗಳಾದ ಪಿ. ಗೀತಾ ಪಾಟೀಲ, ಪಿ. ಮುರ್ತುಜಾ ಖಾದ್ರಿ, ಗಾಯತ್ರಿ, ವಿಶ್ವನಾಥ್, ಮುಡೋಳಪ್ಪ, ಸಂತೋಷ್, ವಿಜಯ ಕ್ರಾಂತಿ ಹಾಗೂ ಮತ್ತೋರ್ವ ಡಿವೈಎಸ್‌ಪಿ ಅಧಿಕಾರಿ ಇದ್ದಾರೆ.
ಡಿವೈಎಸ್‌ಪಿ ನೇರ ನೇಮಕಾತಿಯಲ್ಲೂ ಕೈಚಳಕದ ಶಂಕೆ?
ಹಗರಣದ ಕಿಂಗ್‌ಪಿನ್ ಕನ್ನಾಳೆ ಪೊಲೀಸ್ ಅಧಿಕಾರಿಗಳ ಜೊತೆ ಇಷ್ಟು ಆಪ್ತವಾಗಿರುವ ಫೋಟೋ ಬಹಿರಂಗವಾಗುತ್ತಿದ್ದಂತೆ, ಈ ಹಿಂದೆ ನಡೆದಿರುವ ಡಿವೈಎಸ್‌ಪಿಗಳ ನೇರ ನೇಮಕಾತಿಯಲ್ಲಿಯೂ ಈತ ತನ್ನ ಕೈಚಳಕ ತೋರಿಸಿದ್ದನೇ ಎಂಬ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಒಂದು ವೇಳೆ ಡಿವೈಎಸ್‌ಪಿ ನೇಮಕಾತಿಯಲ್ಲೂ ಈತನ ಕೈವಾಡವಿದ್ದರೆ, ಅದು ಇಷ್ಟು ದಿನಗಳ ಕಾಲವೇಕೆ ಗುಟ್ಟಾಗಿಯೇ ಇತ್ತು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಸದ್ಯ ಈ ಫೋಟೋ ವಿಚಾರವು ಪೊಲೀಸ್ ಇಲಾಖೆಯ ಉನ್ನತ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ್ದು, ತನಿಖೆಯ ಆಗ್ರಹಗಳು ಕೇಳಿಬರುತ್ತಿವೆ.
